ಮಾನ್ವಿ : ಸಮಾಜಸೇವಕ ಹಾಗೂ ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಜಾವೀದ್ ಖಾನ್ ಅವರ ಜನ್ಮದಿನದ ಅಂಗವಾಗಿ ಮಾನ್ವಿ ಪಟ್ಟಣ ಮತ್ತು ಚೀಕಲಪರ್ವಿ ಗ್ರಾಮದಲ್ಲಿ ಮಂಗಳವಾರ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಾನ್ವಿ ಪಟ್ಟಣದ ಶ್ರೀ ನರಳು ಅನಾಥಾಶ್ರಮ ಹಾಗೂ ಶ್ರೀ ಚನ್ನಬಸವೇಶ್ವರ ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ಬಳಿಕ ಮಾನ್ವಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಅವರ ಆರೋಗ್ಯವನ್ನು ವಿಚಾರಿಸಲಾಯಿತು. ನಂತರ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ನೂರಾರು ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ, ಡಾ. ಜಾವೀದ್ ಖಾನ್ ಅವರು ಸಮಾಜದ ಶೋಷಿತರು, ಬಡವರು ಹಾಗೂ ಅಸಹಾಯಕರ ಪರ ನಿರಂತರವಾಗಿ ಹೋರಾಟ ನಡೆಸುತ್ತಿರುವ ಜನಪರ ನಾಯಕರು ಎಂದು ಹೇಳಿದರು. ಅವರ ಸಾಮಾಜಿಕ ಸೇವೆ, ಜನಪರ ಹೋರಾಟಗಳು ಹಾಗೂ ನಿಸ್ವಾರ್ಥ ಸೇವಾ ಮನೋಭಾವವು ಇಂದಿನ ಯುವಕರು ಮತ್ತು ಹೋರಾಟಗಾರರಿಗೆ ಸ್ಪೂರ್ತಿದಾಯಕವಾಗಿದೆ. ಜನ್ಮದಿನವನ್ನು ಆಡಂಬರದಿಂದ ಆಚರಿಸುವ ಬದಲು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

“ಹಸಿದವರಿಗೆ ಅನ್ನ ನೀಡುವುದಕ್ಕಿಂತ ದೊಡ್ಡ ದಾನ ಮತ್ತೊಂದಿಲ್ಲ” ಎಂಬ ಸಂದೇಶದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.

ಈ ಸಂದರ್ಭದಲ್ಲಿ ಹಸನ್ ಗೋಕುಲ್, ಸಿದ್ದರೆಡ್ಡಿ, ರೇಣುಕಾ ರಾಜ, ಮಂಜುನಾಥ್, ರಾಜಸಾಬ್ ನೀರಮಾನ್ವಿ, ಗೋಕುಲ್ ಸಾಬ್, ನಾಗರಾಜ್, ವಾಸುದೇವನ್ ಸೇರಿದಂತೆ ಡಾ. ಜಾವೀದ್ ಖಾನ್ ಅವರ ಅಭಿಮಾನಿಗಳು, ದಲಿತ ಸೇನೆಯ ಪದಾಧಿಕಾರಿಗಳು, ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *