ರಾಯಚೂರು, ಜುಲೈ 7: ರಾಯಚೂರು ಸಮೀಪದ ಸಂಕನೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ನವೋದಯ ಮಾದರಿಯ ಶಾಲೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರೂ, ಹಲವು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಶಿಕ್ಷಕರ ಅಭಾವದಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕರ್ನಾಟಕ ಹೌಸಿಂಗ್ ಬೋರ್ಡ್ ವತಿಯಿಂದ ನಿರ್ಮಾಣಗೊಂಡ ಶಾಲಾ ಕಟ್ಟಡದ ಕೆಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಶೈಕ್ಷಣಿಕ ವರ್ಷದಿಂದಲೇ ನೂತನ ಕಟ್ಟಡದಲ್ಲಿ ತರಗತಿಗಳು ಆರಂಭವಾಗಿದ್ದು, ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಸುಮಾರು 450 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಅಡುಗೆಮನೆ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಸ್ವಚ್ಛತೆ ಮತ್ತು ನಿರ್ವಹಣೆಗೆ ಅಗತ್ಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಶಾಲೆಯಲ್ಲಿ ಕೇವಲ 6 ಮಂದಿ ಕಾಯಂ ಶಿಕ್ಷಕರು ಇದ್ದು, 12 ಮಂದಿ ಅತಿಥಿ ಶಿಕ್ಷಕರ ನೆರವಿನಿಂದ ಬೋಧನಾ ಕಾರ್ಯ ನಡೆಯುತ್ತಿದೆ. ಜೊತೆಗೆ 10 ಮಂದಿ ಡಿ-ಗ್ರೂಪ್ ಸಿಬ್ಬಂದಿ ಹಾಗೂ ಒಬ್ಬ ವಾರ್ಡನ್ ಸೇವೆ ಸಲ್ಲಿಸುತ್ತಿದ್ದಾರೆ.

ಸಂಕನೂರು ಗ್ರಾಮದ ಮುಖ್ಯರಸ್ತೆಯಿಂದ ಶಾಲೆಯವರೆಗೆ ಗುಣಮಟ್ಟದ ರಸ್ತೆ ನಿರ್ಮಾಣ, ವಿದ್ಯಾರ್ಥಿಗಳಿಗಾಗಿ ಆಟದ ಮೈದಾನ ಹಾಗೂ ಇತರೆ ಮೂಲಸೌಕರ್ಯಗಳನ್ನು ಶೀಘ್ರ ಅಭಿವೃದ್ಧಿಪಡಿಸುವಂತೆ ಪಾಲಕರು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಜಿಲ್ಲೆಯ ಜನಪ್ರತಿನಿಧಿಗಳು, ಸಂಸದರು ಹಾಗೂ ಸಂಬಂಧಪಟ್ಟ ಸಚಿವರು ಇದುವರೆಗೆ ಶಾಲೆಗೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಅತಿಥಿ ಶಿಕ್ಷಕರೊಬ್ಬರು, “ಕಡಿಮೆ ಗೌರವಧನದಲ್ಲಿ ರಾಯಚೂರಿನಿಂದ ಸುಮಾರು 15 ಕಿ.ಮೀ. ದೂರ ಪ್ರಯಾಣಿಸಿ ಬೋಧನೆ ಮಾಡುವುದು ಕಷ್ಟಕರವಾಗಿದೆ. ಕನಿಷ್ಠ ವೇತನದ ಆಧಾರದ ಮೇಲೆ ಗೌರವಧನ ನೀಡಬೇಕು” ಎಂದು ಮನವಿ ಮಾಡಿದರು.

ಹಾಸ್ಟೆಲ್‌ನ ಪ್ರತಿಯೊಂದು ಮಹಡಿಗೂ ಪ್ರತ್ಯೇಕ ಕುಡಿಯುವ ನೀರಿನ ಘಟಕ ಅಳವಡಿಸುವುದು ಹಾಗೂ 24×7 ಸಂಪರ್ಕಕ್ಕಾಗಿ ವಿಶೇಷ ದೂರವಾಣಿ ವ್ಯವಸ್ಥೆ ಕಲ್ಪಿಸುವಂತೆ ಪಾಲಕರಾಧ ಮಹಮ್ಮದ್ ಮುಸ್ತಫಾ ದೇವದುರ್ಗ ಒತ್ತಾಯಿಸಿದ್ದಾರೆ.

 

ಪಾಲಕರಾದ ಹಾಜಿ ಅಲಿ ಮಸರರ್ಕಲ್ ಅವರು, “10ನೇ ತರಗತಿಗೆ ಇಂಗ್ಲಿಷ್ ಶಿಕ್ಷಕರ ಕೊರತೆ ಇರುವುದರಿಂದ ಕೂಡಲೇ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಬೇಕು” ಎಂದು ಆಗ್ರಹಿಸಿದರು.

 

ಗ್ರಾಮ ಪಂಚಾಯತ್ ಸದಸ್ಯ ಖಾಜಾ ಹುಸೇನ್ ಬಿಚಾಲಿ ಅವರು, “ಶಿಕ್ಷಕರ ವಸತಿ ಕಟ್ಟಡಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಬಳಕೆಗೆ ನೀಡಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.

 

ಶಾಲೆಯ ಪ್ರಾಂಶುಪಾಲ ಇಸ್ಮೈಲ್ ಸಾಬ್ ಮಾತನಾಡಿ, “ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಯಂ ಶಿಕ್ಷಕರ ಅಗತ್ಯವಿದ್ದು, ಸರ್ಕಾರ ಶೀಘ್ರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಜೊತೆಗೆ ಉಳಿದಿರುವ ಮೂಲಸೌಕರ್ಯಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.

Leave a Reply

Your email address will not be published. Required fields are marked *