ಕವಿತಾಳ -: ಪಟ್ಟಣದ ಮುಖ್ಯ ಹೆದ್ದಾರಿಯ ಹಳೆ ಬಸ್ ನಿಲ್ದಾಣದ ಶಿವಪ್ಪ ತಾತನ ಮಠದಿಂದ ತೊಪ್ಪಲದೊಡ್ಡಿ ಅಗಸಿ ಕಡೆಗೆ ಹೋಗುವ ಮುಖ್ಯ ರಸ್ತೆಯ ಮಧ್ಯೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರ ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿದೆ.
ಚರಂಡಿಗಿಂತ ರಸ್ತೆ ಕೆಳಮಟ್ಟದಲ್ಲಿ ಇದ್ದು ಅಲಲ್ಲಿ ಹಳೆ ಚರಂಡಿ ಕಿತ್ತು ಹೋಗಿದ್ದು ಪ್ರತಿ ದಿನ ನೀರು ಹೆಚ್ಚಾಗಿ ಹರಿದರೆ ಆ ನೀರು ರಸ್ತೆ ಮೇಲೆ ಹರಿಯುತ್ತದೆ. ಚರಂಡಿ ನೀರಿನಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ರಸ್ತೆ ಎಲ್ಲಿದೆ, ಚರಂಡಿ ಎಲ್ಲಿದೆ ಎಂಬುದೇ ತಿಳಿಯದಂತಾಗಿ ದ್ವಿಚಕ್ರ ವಾಹನ ಸವಾರರು, ಹಿರಿಯರು, ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಂಡ ಹಲವು ಘಟನೆಗಳು ನಡೆದಿವೆ.
ಇಂತಹ ಕಲುಷಿತ ನೀರು ಹರಿಯುತ್ತಿರುವ ಕಾರಣ ದುರ್ವಾಸನೆ, ಸೊಳ್ಳೆಗಳ ಹೆಚ್ಚಳ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗುತ್ತಿದೆ. ಶಾಲಾ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸಲು ಬಹಳ ಕಷ್ಟಪಡುತ್ತಿದ್ದಾರೆ.
ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುವ ಜನರು ಹಾಗೂ ಮುಖಂಡರು ಪಟ್ಟಣ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದು ಹಲವು ಬಾರಿ ಮನವಿ ಮಾಡಿದರೂ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಿಸುತ್ತಿಲ್ಲ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ವಚ್ಛತೆ ಮತ್ತು ಉತ್ತಮ ರಸ್ತೆ ವ್ಯವಸ್ಥೆ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಆದ್ದರಿಂದ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಚರಂಡಿ ನೀರು ರಸ್ತೆ ಮೇಲೆ ಹರಿಯದಂತೆ ಶಾಶ್ವತ ವ್ಯವಸ್ಥೆ ಮಾಡಬೇಕು. ಜನರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ದೊರಕಿಸದಿದ್ದರೆ ಪಟ್ಟಣ ಪಂಚಾಯತಿ ಕಚೇರಿಗೆ ಬೀಗ ಹಾಕಿ ತೀವ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

