ಸಿಂಧನೂರು ಜು.6 ರಾಯಚೂರು ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಹಾಗೂ ನಮ್ಮ ಜನರನ್ನು ಬೆಂಗಳೂರು, ಮಂಗಳೂರು, ಆಂದ್ರಪ್ರದೇಶಕ್ಕೆ ಗುಳೆ ಹೋಗುವುದನ್ನು ತಡೆಗಟ್ಟಲು ಈ ಹಿಂದೆ ಜಾರಿಯಲ್ಲಿದ್ದ ಮನರೇಗಾ ಯೋಜನೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಮತ್ತಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ (ಎಐಯುಕೆಎಸ್) ತಾಲ್ಲೂಕು ಘಟಕದಿಂದ ತಹಶೀಲ್ದಾರ್ ಕಚೇರಿ ಮುಂದೆ
ಪ್ರತಿಭಟಿಸಿ ಶಿರಸ್ತೇದಾರ್ ವಾಣಿ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಈ ಭಾರಿ ಮಳೆ ಸಂಪೂರ್ಣ ವಿಫಲವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿವರ್ಷ ಮೇ ಮತ್ತುಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗುತ್ತಿದ್ದವು. ಆದರೆ ಮಳೆ ಬಾರದ ಕಾರಣ ಕೃಷಿ ಚಟುವಟಿಕೆಗಳು
ಸಂಪೂರ್ಣ ನಿಂತು ಹೋಗಿವೆ. ಇದರಿಂದ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಆದಕಾರಣ ರಾಜ್ಯವನ್ನು ಸಂಪೂರ್ಣ ಬರಪೀಡಿತ ಪ್ರವೇಶವೆಂದು ಘೋಷಿಸಬೇಕು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ಮಾಡದೇ ಬರ ಪರಿಹಾರ ಜಾರಿಗೊಳಿಸಬೇಕು’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಭೇರಿಗಿ ಆಗ್ರಹಿಸಿದರು.
ಸಿಪಿಐ(ಎಂಎಲ್) ಮಾಸ್‌ಲೈನ್ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಮಾತನಾಡಿ ‘ಬರಗಾಲದಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳು ತಳ ಕಂಡಿದ್ದು, ನೀರು ಸರಬರಾಜು ಬಹುತೇಕ ಕಡೆ ಸ್ಥಗಿತಗೊಂಡಿದೆ. ಹಳ್ಳ-ಕೊಳ್ಳ ಹಾಗೂ ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಇದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನ-ಜಾನು-ವಾರುಗಳು ಹಾಹಾಕಾರ ಎದುರಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ ಸಣ್ಣ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು. ಜಾನುವಾರು ಸಾಕಣೆದಾರರ ಮನೆ ಮನೆಗೆ ಮೇವು ಸರಬರಾಜು ಮಾಡಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ: ಸದಸ್ಯರಾದ ರಮೇಶ ಬಸಾಪುರ ಮಹಾದೇವ ಅಮರಾಪುರ, ಗಂಗರಾಜ ಭೀಮರಾಜ ಕ್ಯಾಂಪ್, ನಿಂಗಪ್ಪ ಚಿಕ್ಕಭೇರಿಗಿ, ಬಾಲಾಜಿ ಉದ್ಬಾಳ, ಬಸಪ್ಪ ಕಡಬೂರು, ವೆಂಕಟೇಶ ಉದ್ಬಾಳ, ಅಸ್ಲಂ, ಯಮನೂರಪ್ಪ ರತ್ನಾಪುರ ಹಟ್ಟಿ, ಕಾಶಿಮಸಾಬ್, ಮರಿಯಪ್ಪ ನಾಯಕ ಭೇರಿಗಿ, ಕರಿಯಪ್ಪ ತುರ್ವಿಹಾಳ, ನಿಂಗಪ್ಪ ಕೆ, ಲಾಲಸಾಬ್ ಜಿಲೇಬಿ, ಮಹ್ಮದ್ ಅಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

