ಸಿಂಧನೂರು, ಜೂನ್ 27: ಜನ್ಮದಿನವನ್ನು ಕೇವಲ ಸಂಭ್ರಮದ ಆಚರಣೆಯಾಗಿ ಮಾತ್ರವಲ್ಲದೆ, ಸಮಾಜಮುಖಿ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸಂದೇಶ ಸಾರುವ ಉದ್ದೇಶದಿಂದ, ಕಾರುಣ್ಯ ವೃದ್ಧಾಶ್ರಮದಲ್ಲಿ ವೀರಭದ್ರಯ್ಯ ಸ್ವಾಮಿ ಅವರ ಹಿರಿಯ ಪುತ್ರ ವಿಜಯ್ ಕುಮಾರ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಜನ್ಮದಿನದ ಅಂಗವಾಗಿ ಆಶ್ರಮದಲ್ಲಿರುವ ಹಿರಿಯರಿಗೆ ಹಣ್ಣು-ಹಂಪಲು ವಿತರಿಸಿ, ರಾತ್ರಿ ದಾಸೋಹ ಸೇವೆ ಏರ್ಪಡಿಸಲಾಯಿತು. ಆಶ್ರಮದ ನಿವಾಸಿಗಳೊಂದಿಗೆ ಆತ್ಮೀಯವಾಗಿ ಬೆರೆತು ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದ ಕುಟುಂಬದ ಸದಸ್ಯರು ಹಿರಿಯರ ಆಶೀರ್ವಾದ ಪಡೆದು ಸಂತಸ ವ್ಯಕ್ತಪಡಿಸಿದರು. ಈ ಸಮಾಜಮುಖಿ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರುಣ್ಯ ವೃದ್ಧಾಶ್ರಮದ ವ್ಯವಸ್ಥಾಪಕರಾದ ಚನ್ನಬಸವ ಸ್ವಾಮಿ, “ಹಿರಿಯರ ಸೇವೆ ದೇವರ ಸೇವೆಗೆ ಸಮಾನ. ಜನ್ಮದಿನದಂತಹ ವಿಶೇಷ ದಿನಗಳಲ್ಲಿ ವೃದ್ಧಾಶ್ರಮಕ್ಕೆ ಬಂದು ಹಿರಿಯರೊಂದಿಗೆ ಸಮಯ ಕಳೆಯುವುದು, ಅವರಿಗೆ ಆಹಾರ ಹಾಗೂ ಹಣ್ಣು-ಹಂಪಲು ವಿತರಿಸುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಸೇವಾ ಮನೋಭಾವ ಸಮಾಜಕ್ಕೆ ಉತ್ತಮ ಮಾದರಿಯಾಗಿದ್ದು, ಯುವ ಪೀಳಿಗೆಗೂ ಸ್ಫೂರ್ತಿದಾಯಕವಾಗಿದೆ. ವಿಜಯ್ ಕುಮಾರ್ ಅವರಿಗೆ ದೇವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ-ಶಾಂತಿ ಹಾಗೂ ಸಮಾಜಸೇವೆಯ ಮನೋಭಾವವನ್ನು ಇನ್ನಷ್ಟು ವೃದ್ಧಿಸಲಿ” ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ವೀರಭದ್ರಯ್ಯ ಸ್ವಾಮಿ ಅವರ ಕುಟುಂಬದ ಸದಸ್ಯರು, ಚನ್ನಬಸವ ಸ್ವಾಮಿ,ಸನ್ ರೈಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಲಾಜರ್ ಸಿರಿಲ್, ಕಾರುಣ್ಯ ವೃದ್ಧಾಶ್ರಮದ ಸಿಬ್ಬಂದಿ, ಕುಟುಂಬದ ಸದಸ್ಯರು ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದು, ವಿಜಯ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು.

