ರಾಯಚೂರು ಜೂನ್ 17 (ಕರ್ನಾಟಕ ವಾರ್ತೆ): ಮೊಬೈಲ್ ಬಳಕೆಯ ಅಭ್ಯಾಸದಿಂದ ಸಮಯ ಮತ್ತು ಸೃಜನಶೀಲ ಸಾಮರ್ಥ್ಯವನ್ನು ಹಾಳು ಮಾಡುತ್ತಿದ್ದು, ಮೊಬೈಲ್ ಬಳಕೆಯ ಅಭ್ಯಾಸದಿಂದ ಮಕ್ಕಳನ್ನು ದೂರ ಇಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ ಆರ್.ಕಾರಕನೂರು ಅವರು ಹೇಳಿದರು.
ಜೂನ್ 16ರ ಮಂಗಳವಾರ ದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಶಿಶು ಅಭಿವೃದ್ಧಿ ಯೋಜನೆ ರಾಯಚೂರು ಹಾಗೂ ಶಾಲಾ ಮತ್ತು ಶಿಕ್ಷಣ ಇಲಾಖೆ ರಾಯಚೂರು ಇವರ ಸಹಯೋಗದಲ್ಲಿ ಬಾಲವಿಕಾಸ ನಡಿಗೆ ಪಾಲಕರ ಕಡೆಗೆ ಒಂದು ದಿನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಮೊಬೈಲ್‌ನ ಅತಿಯಾದ ಬಳಕೆಯಿಂದ ಕಣ್ಣು ಮತ್ತು ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಎಂದು ತಜ್ಞರ ವರದಿಗಳು ಹೇಳುತ್ತಿವೆ. ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಮೊಬೈಲ್ ಬಳಕೆ ಅಡ್ಡಿಯಾಗುತ್ತಿದೆ. ಹಾಗಾಗಿ ಪೋಷಕರು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ವಯಸ್ಕರು ಕೂಡ ಅಗತ್ಯ ಮೀರಿ ಮೊಬೈಲ್ ಬಳಸಬಾರದು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಾಯಚೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷರು ದರ್ಜೆ-2ರ ಚಾಮರಾಜ, ಸಂಪನ್ಮೂಲ ವ್ಯಕ್ತಿಗಳಾದ ಭರತ್ ಕುಮಾರ್ ಚಂದನಕರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸುದರ್ಶನ, ಸಕಲ ಕೌಶಲ್ಯ ಅಧಿಕಾರಿ ಶಾಂತಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಯೋಜನಾ ಸಂಯೋಜಕ ಮೋಹನ ಕುಮಾರ್, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಂಡರ್ ತಜ್ಞ ಗಿರಿಜವ್ವ ರಾಯಚೂರು, ಜಿಲ್ಲಾ ಬಾಲ ಭವನ ಕಛೇರಿ ಸಹಾಯಕಿ ತಾರಾ ಅವರು ಸೇರಿದಂತೆ ಇತರರು ಇದ್ದರು.
ರಾಯಚೂರಿನ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಲ್ಲಮ್ಮ ಅವರು ಪ್ರಾರ್ಥನೆ ಗೀತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ದೀಪಾ ಅವರು ನಿರೂಪಣೆಯನ್ನು ನೇರವೇರಿಸಿದರು.

