ರಾಯಚೂರು ಜಿಲ್ಲಾದ್ಯಂತ 2025-26ನೇ ಸಾಲಿನಲ್ಲಿ ಜೋಳ ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬಾಕಿ ಇರುವ ಒಟ್ಟು ರೂ. 450 ಕೋಟಿ ಅನುದಾನವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ (ಬೆಂಗಳೂರು) ಇದರ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಪತ್ರ ಬರೆದು ಮನವಿ ಮಾಡಿದ್ದಾರೆ.
ಜಿಲ್ಲಾದ್ಯಂತ ರೈತರ ಹಿತದೃಷ್ಟಿಯಿಂದ ಒಟ್ಟು 36 ಸರ್ಕಾರಿ ಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಕೇಂದ್ರಗಳ ಮೂಲಕ ಜಿಲ್ಲೆಯ ಸುಮಾರು 28 ಸಾವಿರ ರೈತರು ತಮ್ಮ ಜೋಳದ ಬೆಳೆಯನ್ನು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದರು.ರೈತರು ತಮ್ಮ ಕಷ್ಟದ ನಡುವೆಯೂ ಬೆಳೆದ ಜೋಳವನ್ನು ಸರ್ಕಾರಿ ಕೇಂದ್ರಗಳಿಗೆ ತಲುಪಿಸಿದ್ದಾರಾದರೂ, ಪ್ರಸ್ತುತ ಮಾಹಿತಿಯ ಪ್ರಕಾರ ನೊಂದಾಯಿತ ರೈತರಿಗೆ ಪಾವತಿಸಬೇಕಾದ ಒಟ್ಟು ರೂ. 450.00 ಕೋಟಿ (ನಾಲ್ಕು ನೂರ ಐವತ್ತು ಕೋಟಿ) ಅನುದಾನವು ಇನ್ನೂ ಕೂಡ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುವುದಿಲ್ಲ.
“ಪ್ರಸ್ತುತ ಈಗಾಗಲೇ ಮುಂಗಾರು ಜೋಳ ಬಿತ್ತನೆ ಪ್ರಕ್ರಿಯೆ ಆರಂಭವಾಗಿದೆ. ಬಿತ್ತನೆ ಬೀಜ, ಗೊಬ್ಬರ ಖರೀದಿ ಹಾಗೂ ಮುಂದಿನ ಕೃಷಿ ಚಟುವಟಿಕೆಗಳಿಗೆ ಮತ್ತು ದೈನಂದಿನ ಜೀವನ ನಿರ್ವಹಣೆಗೆ ರೈತರು ಹಣವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಧಾನ್ಯ ನೀಡಿದ ರೈತರಿಗೆ ಸಕಾಲದಲ್ಲಿ ಹಣ ಸಿಗದೇ ಇರುವುದು ಅವರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.” ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ 28 ಸಾವಿರ ರೈತರ ಹಿತದೃಷ್ಟಿಯಿಂದ ಮತ್ತು ಅವರ ಕೃಷಿ ಚಟುವಟಿಕೆಗಳು ಕುಂಠಿತಗೊಳ್ಳದಂತೆ ತಡೆಯಲು, ಬಾಕಿ ಇರುವ ಇಡೀ ರೂ. 450 ಕೋಟಿ ಮೊತ್ತವನ್ನು ಯಾವುದೇ ವಿಳಂಬವಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (DBT–Direct Benefit Transfer) ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಲ್ಲಿ ಪತ್ರದ ಮೂಲಕ ಅತ್ಯಂತ ತುರ್ತಾಗಿ ವಿನಂತಿಸಿದ್ದಾರೆ.

ಶಾಸಕ ಹಂಪನಗೌಡ ಬಾದರ್ಲಿ

