ರಾಯಚೂರು, ಜೂ.16: ರಾಜ್ಯ ಸರ್ಕಾರ ಜನರು, ರೈತರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಲೋಕ ಜನಶಕ್ತಿ ಪಕ್ಷದ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಜಿ. ವೆಂಕಟರೆಡ್ಡಿ ಆರೋಪಿಸಿದರು.
ರೈತರಿಗೆ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸುವ ಮೂಲಕ ರೈತರಿಗೆ ಬೀಜ ಮತ್ತು ರಸಗೊಬ್ಬರ ಪಡೆಯುವ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುತ್ತಿದೆ ಎಂದು ಟೀಕಿಸಿದರು.
ಫೋಟೋ ಗುರುತಿನ ಚೀಟಿ ಕಡ್ಡಾಯಗೊಳಿಸಿರುವುದರಿಂದ ಹಲವು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಗುರುತಿನ ಚೀಟಿಗಳಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಮೊದಲು ಸರಿಪಡಿಸಿ, ಬಳಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಲ್ಲದೆ, ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಅಗತ್ಯವಿಲ್ಲದ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರುವ ರಸಗೊಬ್ಬರ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಬೇಕು. ರೈತರಿಗೆ ಬೇಕಾದ ಗೊಬ್ಬರವನ್ನು ಮಾತ್ರ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ ಹೆಸರಿನಲ್ಲಿ ಅನಗತ್ಯ ಷರತ್ತುಗಳನ್ನು ವಿಧಿಸಿ ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳ ಲಾಭ ಸುಲಭವಾಗಿ ದೊರೆಯುವಂತಿರಬೇಕು ಎಂದು ಹೇಳಿದರು.
ಶಾಲಾ-ಕಾಲೇಜುಗಳು ಆರಂಭವಾಗಿದ್ದರೂ ವಿದ್ಯಾರ್ಥಿ ನಿಲಯಗಳು ಇನ್ನೂ ಪ್ರಾರಂಭವಾಗದಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೂಡಲೇ ಹಾಸ್ಟೆಲ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೆಂಬಲ ಬೆಲೆಯಲ್ಲಿ ಜೋಳ ಮಾರಾಟ ಮಾಡಿದ ಅನೇಕ ರೈತರಿಗೆ ಇನ್ನೂ ಬಾಕಿ ಹಣ ಪಾವತಿಯಾಗಿಲ್ಲ. ಸರ್ಕಾರ ತಕ್ಷಣವೇ ರೈತರ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜನರು, ರೈತರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ಸರ್ಕಾರ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಆರೋಪಿಸಿದ ಅವರು, ಅನರ್ಹರಿಗೆ ಯೋಜನೆಗಳ ಸೌಲಭ್ಯ ತಡೆಯುವುದು ಸರ್ಕಾರದ ಕರ್ತವ್ಯವಾದರೂ, ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *