ಸಿಂಧನೂರು 12 ಜೂ: ಸಿಂಧನೂರು 12: ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಯಚೂರು ಮತ್ತು
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ರಾಯಚೂರು ಹಾಗೂ ತಾಲೂಕಾರೋಗ್ಯಾಧಿಕಾರಿಗಳ ಕಾರ್ಯಾಲಯದ ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸ್ಥಳೀಯ ತಾಲ್ಲೂಕು ಆಡಳಿತ ಸೌಧದಲ್ಲಿ ಮಾನ್ಯ ತಹಶೀಲ್ದಾರ್ ಅರುಣ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಜೂನ್ ತಿಂಗಳ “ಮಲೇರಿಯಾ ವಿರೋಧ ಮಾಸಾಚರಣೆ” ಹಾಗೂ ಜೂನ್ 28 ರಿಂದ ಜುಲೈ 1ರ ವರೆಗೆ ನಡೆಯಲಿರುವ “ರಾಷ್ಟ್ರೀಯ ಪಲ್ಸ್ ಪೋಲಿಯೋ” ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ವರ್ಷದ ಮಲೇರಿಯಾ ವಿರೋಧ ಮಾಸಾಚರಣೆಯನ್ನು “ಮಲೇರಿಯಾ ಅಂತ್ಯಗೊಳಿಸಲು ಸಂಕಲ್ಪ ಮಾಡೋಣ: ನಮಗಿದು ಸಾಧ್ಯವಿದೆ, ನಾವು ಇದನ್ನು ಮಾಡಲೇಬೇಕು” ಎಂಬ ಘೋಷವಾಕ್ಯದೊಂದಿಗೆ ಪರಿಣಾಮಕಾರಿಯಾಗಿ ಆಚರಿಸಲು ಸಹಿತ ತಹಶೀಲ್ದಾರರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಾನ್ಸೂನ್ ಅವಧಿಯಲ್ಲಿ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಶಾಲಾ-ಕಾಲೇಜು ಆವರಣಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸುವುದು ಮತ್ತು ಪ್ರತಿ ಶನಿವಾರ ಪ್ರೌಢಶಾಲೆಗಳ ಮೂಲಕ ಅರಿವಿನ ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಇದರೊಂದಿಗೆ ವಲಸಿಗ ಜ್ವರ ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲು ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಮನೆ-ಮನೆ ಭೇಟಿ ನೀಡಿ ಸಾರ್ವಜನಿಕರಲ್ಲಿ ವ್ಯಾಪಕ ಜನಜಾಗೃತಿ ಮೂಡಿಸಲು ಇಲಾಖಾವಾರು ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ಇದೇ ಸಭೆಯಲ್ಲಿ ದಿನಾಂಕ 28 ಜೂನ್ ರಿಂದ 1ನೇ ಜುಲೈ 2026ರ ವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಕೂಡ ಪರಾಮರ್ಶಿಸಲಾಯಿತು. ತಾಲ್ಲೂಕಿನ 0 ಯಿಂದ 5 ವರ್ಷದೊಳಗಿನ ಎಲ್ಲಾ ಅರ್ಹ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಆದೇಶಿಸಲಾಯಿತು. ವಿಶೇಷವಾಗಿ ಇಟ್ಟಿಗೆ ಭಟ್ಟಿ, ಅಲೆಮಾರಿ ತಾಣಗಳು ಹಾಗೂ ದುರ್ಗಮ ಪ್ರದೇಶಗಳ ವಲಸಿಗ ಮಕ್ಕಳ ಮೇಲೆ ವಿಶೇಷ ಕಣ್ಗಾವಲು ಇಟ್ಟು ಮೊಬೈಲ್ ತಂಡಗಳ ಮೂಲಕ ಲಸಿಕೆ ತಲುಪಿಸಲು ರೂಪುರೇಷೆ ಸಿದ್ಧಪಡಿಸಲಾಯಿತು. ಬೂತ್ ದಿನದ ನಂತರ ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಕ್ರಾಸ್ ವೆರಿಫಿಕೇಶನ್ ಮಾಡಲಿದ್ದಾರೆ. ರಾಷ್ಟ್ರೀಯ ಮಹತ್ವದ ಈ ಎರಡೂ ಆರೋಗ್ಯ ಅಭಿಯಾನಗಳಲ್ಲಿ ಸಾರ್ವಜನಿಕರ ಹಾಗೂ ಸಮುದಾಯದ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಅರುಣ್ ದೇಸಾಯಿ ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಯಾವುದೇ ಲೋಪವಿಲ್ಲದೆ ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಸಭೆಯಲ್ಲಿ ಕಡಕ್ ಎಚ್ಚರಿಕೆ ನೀಡಲಾಯಿತು.
ಈ ಕಾರ್ಯಮದಲ್ಲಿ
ತಾಲೂಕಾ ಪಂಚಾಯತ ಈ.ಓ ಮಂಜುನಾಥ,ನಗರ ಸಭೆಯ ಪೌರಾಯುಕ್ತರಾದ ಪಾಂಡುರಂಗ.ಇಟಗಿ,ತಾಲೂಕಾರೋಗ್ಯಾಧಿಕಾರಿಗಳಾದ ಡಾ.ಅಯ್ಯನಗೌಡ,ನಗರ.ಆ.ಕೇಂದ್ರದ ಡಾ.ಮೇರಿ ಭಂಡಾರಿ,ಡಾ.ಶೃತಿ.ಆರ್ ಮಕ್ಕಳ ತಜ್ಞರು ತಾಯಿ & ಮಕ್ಕಳ ಆಸ್ಪತ್ರೆ ಸಿಂಧನೂರ, ಹಿ.ಆ.ನಿ.ಅಧಿಕಾರಿಗಳಾದ ರಂಗನಾಥ. ಜಿ ,ಸಂಗನಗೌಡ.ಮಾ.ಪಾಟೀಲ್,ವಿ.ಬಿ.ಡಿ ಮೇಲ್ವಿಚಾರಕ ಎಫ್.ಎ.ಹಣಗಿ,ತಾಲೂಕಾ ಬಿ.ಪಿ.ಎಮ್-ತ್ರಿವೇಣಿ ಭಂಡಾರಿ ಭದ್ರೇಶ ಕೆ.ಕೆ.ಆರ್.ಟಿ.ಸಿ,ಸೋಮಲಿಂಗಪ್ಪ ಉಪ ಶಿಕ್ಷಣಾಧಿಕಾರಿಗಳು ಸಿಂಧನೂರು,ಡಾ.ಲಕ್ಷ್ಮಿ ಕೆನಕಿ,ವಿಜಯಲಕ್ಷ್ಮಿ ಗೋವಿನ ಕಾರ್ಮಿಕ ಇಲಾಖೆ,ಮಲ್ಲಿಕಾ ಅರಣ್ಯ ಇಲಾಖೆ, ಜಿಲ್ಲಾ.ಮೇಲ್ವಿಚಾರಕ ರಾಘವೇಂದ್ರ,ಕಿಷನ್ ರಾವ್ ನಗರ.ಸಭೆ,ಆರೋಗ್ಯ ಶಿಕ್ಷಣಾಧಿಕಾರಿಯಾದ ಬಾಲಪ್ಪ ನಾಯಕ ಜವಳಗೇರಾ, ನಗರದ ಮಲ್ಲಪ್ಪ,ಹನುಮಂತ,ತ್ರೆಜಾ,ಕಮಲ,ಶಮಿನಾ,ರಾಜೇಶ್ವರಿ,ಶಾಂತಾ ಮತ್ತು ಪ್ರಾ.ಆ.ಕೇಂದ್ರದ ರೋಷನ್ ಬಿ,ಸರಸ್ವತಿ, ಶಾಮು,ಸೋಮನಾಥ,ಮಲ್ಲಿಕಾರ್ಜುನ, ಕಲ್ಮೇಷ,ಮಂಜುನಾಥ ಹಾರಾಪೂರ,ಫಕೀರಚಂದ,ಪ್ರಕಾಶ ನಾಯಕ, ಆಶಾ.ಕಾ.ಕರ್ತೆಯರು ಹಾಜರಿದ್ದರು


