ತಾಳಿಕೋಟಿ: ಸಕಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು ಮಹಾದಾನ ಎನಿಸಿಕೊಂಡಿದೆ. ಆರೋಗ್ಯವಂತರೆಲ್ಲರೂ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ಉಳಿಸಬಹುದಾಗಿದೆ ಎಂದು ಹಿಕ್ಕನಗುತ್ತಿ ಬಸವ ಮಹಾಮಠದ ಪೀಠಾಧಿಪತಿ ಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ರಾಜವಾಡೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರ, ಜಿಲ್ಲಾ ರಕ್ತ ನಿಧಿ ಕೇಂದ್ರ ವಿಜಯಪುರ, ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟಿ ಹಾಗೂ ಶ್ರೀ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ರಕ್ತವನ್ನು ಕೃತಕವಾಗಿ ತಯಾರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಒಬ್ಬರ ರಕ್ತವನ್ನು ಮತ್ತೊಬ್ಬರಿಗೆ ನೀಡಿಯೇ ಜೀವ ಉಳಿಸಬೇಕು.ರಕ್ತದಾನ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಅಲ್ಲದೆ ಅದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಬದಲಾಗಿ ರೋಗಿಗಳಿಗೆ ಅದು ವರದಾನವಾಗುತ್ತದೆ ಎಂದ ಅವರು ಮೂರ್ತಿ ಪ್ರತಿಷ್ಠಾಪನೆಯ ಮೂರನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡ್ತಿ ಪಾಟೀಲ ಹಾಗೂ ಅವರ ಇಡೀ ಬಳಗಕ್ಕೆ ಅಭಿನಂದಿಸುತ್ತೇನೆ ಎಂದರು. ಸಮಿತಿಯ ಅಧ್ಯಕ್ಷೆ ನೀಲಮ್ಮಗೌಡ್ತಿ ಪಾಟೀಲ ಅವರು ಮಾತನಾಡಿ ಈ ಬಾರಿ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಪ್ರತಿದಿನವೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಇರಲಿ ಎಂದರು. ಶಿಬಿರದಲ್ಲಿ 18 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಯಿತು. ರಕ್ತ ನೀಡಿದ ದಾನಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಸಮಿತಿಯ ಗೌರವ ಅಧ್ಯಕ್ಷ ಚಂದ್ರಶೇಖರ ಪಾಟೀಲ, ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಮಲ್ಲನಗೌಡ ದ್ಯಾಪೂರ, ನ್ಯಾಯವಾದಿ ಗುರುಪಾದ ಮಾರ್ಸನಳ್ಳಿ, ಶರಣಗೌಡ ಬಿರಾದಾರ ಮಿಣಜಗಿ, ಶಿವರಾಜ ಪಾಟೀಲ,ರೇಣುಕಾ ಬಿರಾದಾರ,ಡಾ. ಅರಸಿದ್ದ ಮುಂಡರಗಿ, ಬಸವರಾಜ ಅಗ್ನಿ, ಅರುಣಕುಮಾರ, ದಿಲೀಪ ಸಿಂಗೆ, ಪ್ರಕಾಶ, ಅನ್ನಪೂರ್ಣ ಹಿರೇಗೌಡರ, ಸಿದ್ದಮ್ಮ ಬ್ಯಾಲ್ಯಾಳ, ಕಾಶಿಬಾಯಿ ಶರಣ ವಿದ್ಯಾ ನಾಡಕರಣಿ, ದೇವಕಿ ಮಾಯಾಚಾರಿ, ಲಕ್ಷ್ಮೀಂಬಾಯಿ ಚಳೇಕಾರ, ನಿಂಗಮ್ಮ ತಂಗಡಗಿ, ಶಿವಲೀಲಾ ಲಿಂಗದಳ್ಳಿ, ನಾಗಮ್ಮ ಪಾಟೀಲ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.

