ಜಾಲಹಳ್ಳಿ, ಜೂನ್ 11: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಅಂಬೇಡ್ಕರ್ ವೃತ್ತದಿಂದ ರಂಗನಾಥ ದೇವಸ್ಥಾನದವರೆಗೆ ನಾಲೆಗಳ (ಡ್ರೈನೇಜ್) ಸ್ವಚ್ಛತಾ ಕಾರ್ಯವನ್ನು ಜೆಸಿಬಿ ಯಂತ್ರಗಳ ಮೂಲಕ ಬೃಹತ್ ಮಟ್ಟದಲ್ಲಿ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ನೇತೃತ್ವದಲ್ಲಿ ನಾಲೆಗಳ ಸ್ವಚ್ಛತೆ ಮತ್ತು ಅತಿಕ್ರಮಣ ತೆರವು ಕಾರ್ಯ ನಡೆಸಲಾಯಿತು.
ಕಳೆದ ಎಂಟು ದಿನಗಳಿಂದ ರೈತ ಸಂಘ ಹಾಗೂ ಡಿವೈಎಫ್‌ಐ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ನಾಲೆಗಳ ಸ್ವಚ್ಛತೆ ಹಾಗೂ ಅತಿಕ್ರಮಣ ತೆರವಿಗೆ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯಾರಂಭ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಖುರೇಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಹಕಾರದಿಂದ ಬೃಹತ್ ಡ್ರೈನೇಜ್ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದಾಗಿ ತಿಳಿಸಿದರು.
ಬಾಕ್ಸ್ ನಲ್ಲಿ
ಸಾರ್ವಜನಿಕರ ಪರವಾಗಿ ಮಾತನಾಡಿದ ಮುದುರಂಗಪ್ಪ ವಟಾರ್, ಗ್ರಾಮದ ಎಲ್ಲಾ ವಾರ್ಡ್‌ಗಳಲ್ಲಿ ಡ್ರೈನೇಜ್ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸಿ ಸಂಪೂರ್ಣ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.
ಬಾಕ್ಸ್ ನಲ್ಲಿ
ಜಾಕಿರ್ ಹುಸೇನ್ ಆರತಿ ಗ್ರಾಮ ಪಂಚಾಯಿತಿಯ ಡ್ರೈನೇಜ್ ಸ್ವಚ್ಛತಾ ಕ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶ್ರೀಧರ ದೇಸಾಯಿ, ವೆಂಕೋಬ ತೋಟದ, ದುರ್ಗಪ್ಪ ರಾಮಪಾಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರೇಶ್ ಅರಿಕೇರಿ, ಸದಸ್ಯರಾದ ಅಬ್ದುಲ್ ರೆಹಮಾನ್ ಖುರೇಶಿ, ಶಿವಪ್ಪ ಗಾಂಜಿ, ತಿಮ್ಮಣ್ಣ ನಾಯಕ್ ದಿವಾನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಪ್ಪ, ಬಿಲ್ ಕಲೆಕ್ಟರ್ ವೆಂಕೋಬ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

