ಬಳಗಾನೂರು, ಜೂನ್ 11: ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಕುರಿತು ಬೀದಿಬದಿ ವ್ಯಾಪಾರಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಗುರುವಾರ ಬೆಳಿಗ್ಗೆ ಬಳಗಾನೂರು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಹುಸೇನ್ ಭಾಷಾ ಬೂದಗುಂಪ ಹಾಗೂ ಮುಖ್ಯಾಧಿಕಾರಿ ಗೋಪಾಲ ನಾಯಕರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಹನುಮಂತ ಯಾದವ್ ಮಾತನಾಡಿ, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತಮ್ಮ ಮನೆ, ಅಂಗಡಿ ಮತ್ತು ವ್ಯಾಪಾರ ಸ್ಥಳಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಪಟ್ಟಣ ಪಂಚಾಯತ್ ಕಸದ ವಾಹನಕ್ಕೆ ನೀಡುವಂತೆ ಕರೆ ನೀಡಿದರು.ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಾಗಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವುದರಿಂದ ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ಕಾಪಾಡುವಿಕೆ ಹಾಗೂ ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹುಸೇನ್ ಭಾಷಾ ಬೂದಗುಂಪ ಹಾಗೂ ಮುಖ್ಯಾಧಿಕಾರಿ ಗೋಪಾಲ ನಾಯಕ್ ಮಾತನಾಡಿ, ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪ್ರತಿಯೊಬ್ಬ ನಾಗರಿಕರು ಪಾಲಿಸುವ ಮೂಲಕ ಸ್ವಚ್ಛ ಹಾಗೂ ಸುಂದರ ಬಳಗಾನೂರು ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ಭೀಮಪ್ಪ, ಮಲ್ಲಿಕಾರ್ಜುನ ಹಾಲಾಪೂರು, ಸಿಆರ್‌ಪಿ ಗೀತಾ ಚನ್ನಬಸವ, ಸಮುದಾಯ ಸಂಚಾಲಕಿಯರಾದ ಗೀತಾ ಸುರೇಶ ಹಾಗೂ ದುರುಗಮ್ಮವಿರುಪಾಕ್ಷಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮತ್ತು ಬೀದಿಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.
ವರದಿ: ಸುರೇಶ ಬಳಗಾನೂರು.

Leave a Reply

Your email address will not be published. Required fields are marked *