ಮುದ್ದೇಬಿಹಾಳ: “ಪ್ರತಿ ಮನೆಯಲ್ಲೂ ಮನುಷ್ಯರು ಸಿಗುತ್ತಾರೆ. ಆದರೆ ಮನುಷ್ಯತ್ವ ಸಿಗುವುದು ಅಪರೂಪ. ವಸತಿ ನಿಲಯಗಳ ಸಿಬ್ಬಂದಿಗಳು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕೆಲಸ ಮಾಡಬೇಕು” ಎಂದು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೊದ್ದಾರ್ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ 2026-27ನೇ ಸಾಲಿನ ವಿದ್ಯಾರ್ಥಿ ನಿಲಯಗಳ ಪ್ರಾರಂಭೋತ್ಸವ, ನಿಲಯಗಳ ಸಮರ್ಪಕ ನಿರ್ವಹಣೆ ಕುರಿತ ನಿಲಯಪಾಲಕರು ಹಾಗೂ ಗ್ರೂಪ್-ಡಿ ಸಿಬ್ಬಂದಿಗಳ ಪುನಶ್ಚೇತನ ಕಾರ್ಯಾಗಾರ ಮತ್ತು ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಅಡುಗೆ ಸಿಬ್ಬಂದಿಗಳ ಸಹಕಾರ ಮತ್ತು ಅವರ ಕೈರುಚಿಯೂ ಮುಖ್ಯವಾಗುತ್ತದೆ. ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಕೆಲಸ ಮಾಡುವ ಮುನ್ನ ನಮ್ಮನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು ಸೇರಿದಂತೆ ಎಲ್ಲ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಶೀಘ್ರದಲ್ಲೇ ಅಡುಗೆ ಸಿಬ್ಬಂದಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ವಿತರಿಸಲಾಗುವುದು. ಸಿಬ್ಬಂದಿಗಳು ಸಮವಸ್ತ್ರ ಧರಿಸಿ ನಿಲಯಕ್ಕೆ ಬರಬೇಕು. ವೇತನ ಸಂಬಂಧಿತ ಸಮಸ್ಯೆಗಳನ್ನು ಸರ್ಕಾರದ ಸುತ್ತೋಲೆಯ ಪ್ರಕಾರ ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-2 ಸಹಾಯಕ ನಿರ್ದೇಶಕಿ ಬಸಂತಿ ಮಠ ಮಾತನಾಡಿ, “ಪ್ರತಿ ವರ್ಷದಂತೆ ಈ ವರ್ಷವೂ ಸಿಬ್ಬಂದಿ ಎದುರಿಸುತ್ತಿರುವ ಇಎಸ್‌ಐ ಹಾಗೂ ಪಿಎಫ್ ಸಮಸ್ಯೆಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಮಕ್ಕಳಿಗೆ ಪ್ರೀತಿಯಿಂದ ಉತ್ತಮ ಆಹಾರ ಸಿದ್ಧಪಡಿಸಿ ನೀಡಿದರೆ ಅವರಲ್ಲಿ ಸಿಬ್ಬಂದಿಗಳ ಮೇಲಿನ ಗೌರವ ಮತ್ತು ವಿಶ್ವಾಸ ಹೆಚ್ಚುತ್ತದೆ. ಮಕ್ಕಳನ್ನು ದೇವರೆಂದು ಭಾವಿಸಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ” ಎಂದು ಹೇಳಿದರು.
ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಬಿಸಿಎಂ ವಸತಿ ನಿಲಯಗಳ ಸಿಬ್ಬಂದಿಗೆ ಹೋಲಿಸಿದರೆ ಸಮಾಜ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿಗಳ ವೇತನ ಕಡಿಮೆ ಇದೆ. ವೇತನ ಹೆಚ್ಚಳ ಮಾಡಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು ಹಾಗೂ ವೇತನ ಸ್ಲಿಪ್ ನೀಡಬೇಕು ಎಂದು ಆಗ್ರಹಿಸಿದರು.
ವರ್ಷಕ್ಕೆ ಎರಡು ಬಾರಿ ಇಲಾಖೆ ಹಾಗೂ ಹೊರಗುತ್ತಿಗೆದಾರರ ಸಭೆ ನಡೆಸಬೇಕು. ಸಿಬ್ಬಂದಿಗಳಿಗೆ ಐಡಿ ಕಾರ್ಡ್ ವಿತರಿಸಬೇಕು. ವಾರಕ್ಕೊಂದು ದಿನ ಕಡ್ಡಾಯ ರಜೆ ನೀಡಬೇಕು. ಕನಿಷ್ಠ ವೇತನ ಕಾಯ್ದೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು. ಅಡುಗೆ ಸಿಬ್ಬಂದಿಗಳು ವಸತಿ ನಿಲಯದ ಸ್ವಚ್ಛತೆ ಕಾಪಾಡಿ ಅಧಿಕಾರಿಗಳು ಹಾಗೂ ವಾರ್ಡನ್‌ಗಳಿಗೆ ಗೌರವ ನೀಡಬೇಕು ಎಂದರು.
ಸಭೆಯಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಹಾಗೂ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದ ಸಾಧನೆಯನ್ನು ಶ್ಲಾಘಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಶಿವಲಿಂಗಪ್ಪ ಹಜಡದ, ಎಫ್‌ಡಿಸಿ ಎಸ್.ಕೆ. ಲಮಾಣಿ, ವಸತಿ ವಲಯದ ಮೇಲ್ವಿಚಾರಕರಾದ ಸಂಗಮೇಶ ವಾಲಿಕಾರ, ಎಸ್.ಎಂ. ಕಲಬುರ್ಗಿ, ಎಸ್.ಎಂ. ಬಾಸಗಿ, ಶ್ರೀಕಾಂತ ಸಲಗರ, ನಾಗರಾಜ ಗುಡಗುಂಟಿ, ಎಸ್.ಎನ್. ಮಲ್ಲಾಡೆ, ಎನ್.ವಿ. ಕೋರಿ, ಮಹಾಂತೇಶ ತಾಳಿಕೋಟೆ, ರೇಣುಕಾ ಪಾಟೀಲ, ಸಾವಿತ್ರಿ ಬಿರಾದಾರ, ವಾಣಿ ಹನಗುಂಡ ಸೇರಿದಂತೆ ತಾಲ್ಲೂಕಿನ ವಿವಿಧ ವಸತಿ ನಿಲಯಗಳ ಅಡುಗೆ ಸಿಬ್ಬಂದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

