ಮಾನ್ವಿ -: ರಾತ್ರಿ ಮನೆ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಮಲಗಿದ್ದ ಸಲಾವುದ್ದೀನ್ ಅವರಿಗೆ ಸಣ್ಣದೊಂದು ಶಬ್ದ ಕೇಳಿಸಿತು. ಎದ್ದು ನೋಡಿದಾಗ ಕಿಟಕಿಯ ಗಾಜಿಗೆ ಚಿಕ್ಕ ಗುಬ್ಬಿಗಳು ಕುಟುಕುತ್ತಿದ್ದವು. ಮನೆಯೊಳಗೆ ಗೂಡು ಕಟ್ಟಿದ್ದ ಅವುಗಳು ಒಳಗೆ ಬರಲಾಗದೆ ಹೊರಗೇ ಉಳಿದಿದ್ದವು. ಆ ಕ್ಷಣದಲ್ಲಿ ಸಲಾವುದ್ದೀನ್ ಅವರ ಮನಸ್ಸು ಕರಗಿತು. ‘ಈ ಚಿಕ್ಕ ಜೀವಿಗಳಿಗೆ ಆಶ್ರಯ ಕೊಡದೇ ನಾವು ಮನುಷ್ಯತ್ವದ ಬಗ್ಗೆ ಹೇಗೆ ಮಾತನಾಡಬಹುದು?’ ಎಂಬ ಪ್ರಶ್ನೆ ಅವರನ್ನು ಕಾಡಿತು. ಆ ಒಂದು ಘಟನೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಗುತ್ತಿಗೆದಾರ ಸಲಾವುದ್ದೀನ್ ಕಳೆದ ಹತ್ತು ವರ್ಷಗಳಿಂದ ಪಕ್ಷಿಗಳ ಆರೈಕೆಯನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಜನರ ಪಾಲಿಗೆ ಅವರು ಈಗ ‘ಪಕ್ಷಿಪ್ರೇಮಿ ಸಲಾವುದ್ದೀನ್’ ಎಂದೇ ಪರಿಚಿತರು. ಅವರ ಮನೆಯಂಗಳಕ್ಕೆ ಕಾಲಿಟ್ಟರೆ ಅದು ಸಾಮಾನ್ಯ ಮನೆ ಎನ್ನಿಸುವುದಿಲ್ಲ. ಪೈಪು, ಗಡಿಗೆಗಳಿಂದ ಮಾಡಿರುವ ಕೃತಕ ಗೂಡುಗಳು, ನೀರಿನ ಪಾತ್ರೆಗಳು, ಕಾಳು-ಕಡಿಯ ಪಾತ್ರೆಗಳು ಎಲ್ಲೆಲ್ಲೂ ಕಾಣುತ್ತವೆ. ಗುಬ್ಬಿ, ಮೈನಾ, ಬೆಳ್ಳಕ್ಕಿ, ಕಾಗೆ ಸೇರಿದಂತೆ ಹಲವು ಪಕ್ಷಿಗಳು ಅಲ್ಲಿ ಸ್ವಚ್ಛಂದವಾಗಿ ಹಾರುತ್ತಿರುತ್ತವೆ. ಪಕ್ಷಿಗಳ ಚಿಲಿಪಿಲಿ ಧ್ವನಿಯಿಂದ ಮನೆಯಂಗಳ ಸದಾ ಕಳೆಗಟ್ಟಿರುತ್ತದೆ. ಬೆಳಗಿನ ಜಾವ ಪಕ್ಷಿಗಳ ಕಲರವದೊಂದಿಗೇ ಮನೆಯವರ ದಿನ ಆರಂಭವಾಗುತ್ತದೆ.

ಕೆಲವೊಮ್ಮೆ ಪಕ್ಷಿಗಳು ಮನೆಯೊಳಗೇ ಬಂದು ಕಿಟಕಿಯ ಮೇಲೆ, ಬಾಗಿಲಿನ ಅಂಚಿನಲ್ಲಿ ಕುಳಿತುಕೊಳ್ಳುತ್ತವೆ. ಮನೆಯವರು ಅವುಗಳನ್ನು ಓಡಿಸುವುದಿಲ್ಲ. ಬದಲಿಗೆ ಮನೆಯ ಸದಸ್ಯರಂತೆ ಮಾತನಾಡಿಸುತ್ತಾರೆ. ಹೀಗೆ ಮನುಷ್ಯರು ಮತ್ತು ಪಕ್ಷಿಗಳ ನಡುವೆ ಒಂದು ಅಪರೂಪದ ಬಾಂಧವ್ಯ ಅಲ್ಲಿ ಬೆಳೆದಿದೆ. ಸಲಾವುದ್ದೀನ್ ಅವರಿಗೆ ಪಕ್ಷಿಗಳು ಕೇವಲ ಜೀವಿಗಳಲ್ಲ; ಮನೆಯ ಸದಸ್ಯರೇ ಆಗಿವೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಅವುಗಳಿಗೆ ನೀರು ಇಡುವುದು, ಕಾಳು ಹಾಕುವುದು ಅವರ ಮೊದಲ ಕೆಲಸ. ಯಾವ ಪಾತ್ರೆಯಲ್ಲಿ ನೀರು ಕಡಿಮೆಯಾಗಿದೆ, ಯಾವ ಗೂಡಿನಲ್ಲಿ ಹೊಸ ಪಕ್ಷಿ ಬಂದಿದೆ ಎಂಬುದನ್ನೂ ಅವರು ಗಮನಿಸುತ್ತಾರೆ. ಬೇಸಿಗೆಯ ಬಿಸಿಲಿನಲ್ಲಿ ನೀರಿಗಾಗಿ ಹಾತೊರೆಯುವ ಹಕ್ಕಿಗಳನ್ನು ನೋಡಿದಾಗ ಅವರಿಗೆ ನೋವಾಗುತ್ತದೆ. ‘ಮನುಷ್ಯರಿಗೆ ದಾಹವಾದರೆ ಕೇಳಿಕೊಂಡು ನೀರು ಕುಡಿಯಬಹುದು. ಆದರೆ ಈ ಮೂಕ ಜೀವಿಗಳು ಯಾರನ್ನು ಕೇಳಬೇಕು?’ ಎಂದು ಅವರು ಪ್ರಶ್ನಿಸುತ್ತಾರೆ.

ಸಲಾವುದ್ದೀನ್ ಅವರ ಈ ಕಾರ್ಯಕ್ಕೆ ಕುಟುಂಬದ ಬೆಂಬಲವೂ ದೊಡ್ಡ ಶಕ್ತಿ. ಪತ್ನಿ, ಮಕ್ಕಳು ಪಕ್ಷಿಗಳಿಗೆ ಆಹಾರ ಹಾಕುವುದರಿಂದ ಹಿಡಿದು ಗಾಯಗೊಂಡ ಪಕ್ಷಿಗಳ ಆರೈಕೆವರೆಗೂ ಎಲ್ಲ ಕೆಲಸಗಳಲ್ಲಿ ಕೈಜೋಡಿಸುತ್ತಾರೆ. ಮನೆಯವರು ಹೊರಗಡೆ ಹೋಗುವ ಸಂದರ್ಭದಲ್ಲೂ ಮೊದಲು ಪಕ್ಷಿಗಳಿಗೆ ನೀರು-ಆಹಾರದ ವ್ಯವಸ್ಥೆ ಮಾಡಿಕೊಂಡೇ ಹೋಗುತ್ತಾರೆ. ‘ಕುಟುಂಬದ ಸಹಕಾರ ಇರದಿದ್ದರೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಹೇಳುತ್ತಾರೆ. ಅವರ ಸ್ನೇಹಿತ ಜಗನ್ನಾಥ ಚೌದರಿ ಸಹ ಸದಾ ಜೊತೆಗಿದ್ದು ನೆರವಾಗುತ್ತಿದ್ದಾರೆ.

ಸಲಾವುದ್ದೀನ್ ಅವರ ಮನೆ ಈಗ ಪಕ್ಷಿಪ್ರೇಮಿಗಳ ಆಕರ್ಷಣೆಯ ಕೇಂದ್ರವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರಾಸಕ್ತರು ತಂಡಗಳಾಗಿ ಬಂದು ಅವರ ಕಾರ್ಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪಕ್ಷಿಗಳಿಗೆ ಅವರು ಮಾಡಿರುವ ಗೂಡುಗಳು, ನೀರಿನ ವ್ಯವಸ್ಥೆ, ಆರೈಕೆಯ ವಿಧಾನಗಳನ್ನು ನೋಡಿ ಹಲವರು ತಮ್ಮ ಮನೆಯಲ್ಲೂ ಇದೇ ರೀತಿಯ ಪ್ರಯತ್ನ ಆರಂಭಿಸಿದ್ದಾರೆ.

ಸ್ವತಃ ಸಲಾವುದ್ದೀನ್ ವಿವಿಧ ಕಾರ್ಯಕ್ರಮಗಳಿಗೆ ತೆರಳಿ ಪಕ್ಷಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಮನೆಯಂಗಳದಲ್ಲಿ ಒಂದು ಪಾತ್ರೆ ನೀರು ಇಟ್ಟರೂ ಸಾಕು, ಅದು ಒಂದು ಪಕ್ಷಿಯ ಜೀವ ಉಳಿಸಬಹುದು ಎಂಬ ಸಂದೇಶವನ್ನು ಅವರು ಜನರಿಗೆ ನೀಡುತ್ತಿದ್ದಾರೆ. ಪಕ್ಷಿಗಳಿಗೆ ನೀರುಣಿಸಲು ಬಳಸುವ ವಿಶೇಷ ಬಾಟಲಿಗಳನ್ನು ಉಚಿತವಾಗಿ ಹಂಚಿ, ಕಡಿಮೆ ವೆಚ್ಚದಲ್ಲಿ ಅವುಗಳನ್ನು ಹೇಗೆ ಅರಿಸಬೇಕು ಎಂಬುದನ್ನೂ ಕಲಿಸುತ್ತಿದ್ದಾರೆ.

“ಪಕ್ಷಿಗಳಿಗೆ ದೊಡ್ಡ ಸಹಾಯ ಮಾಡಬೇಕೆಂದಿಲ್ಲ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಇಟ್ಟರೂ ಸಾಕು’ ಎಂಬುದು ಅವರ ಸರಳ ಮನವಿಯಾಗಿದೆ. ಒಮ್ಮೆ ಮನೆಯಂಗಳದಲ್ಲೇ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಗುಬ್ಬಿಗಳು ಇಂದು ಅಪರೂಪವಾಗುತ್ತಿವೆ. ಮರಗಳ ನಾಶ, ವಾಯುಮಾಲಿನ್ಯ, ಮೊಬೈಲ್‌ ವಿಕಿರಣ, ರಾಸಾಯನಿಕ ಬಳಕೆ-ಇವೆಲ್ಲವೂ ಪಕ್ಷಿಗಳ ಬದುಕಿಗೆ ದೊಡ್ಡ ಅಪಾಯವಾಗಿವೆ.

ಈ ನಡುವೆ ಸಲಾವುದ್ದೀನ್ ಅವರಂತಹವರು ಕೇವಲ ಪಕ್ಷಿಗಳನ್ನು ಉಳಿಸುತ್ತಿಲ್ಲ; ಮಾನವೀಯತೆಯನ್ನೂ ಜೀವಂತವಾಗಿರಿಸುತ್ತಿದ್ದಾರೆ. ಒಂದು ಪಾತ್ರೆ ನೀರು, ಒಂದು ಮುಷ್ಟಿ ಕಾಳು ಮತ್ತು ಸ್ವಲ್ಪ ಮಮತೆ ಇದ್ದರೆ ಸಾಕು, ಮೂಕ ಜೀವಿಗಳ ಬದುಕಿನಲ್ಲಿ ಆಶೆಯಾಗಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.

Leave a Reply

Your email address will not be published. Required fields are marked *