ಬಳ್ಳಾರಿ / ಕಂಪ್ಲಿ: ತಾಲ್ಲೂಕಿನಲ್ಲಿ ಸರ್ಕಾರದ ಮರುಳು ಕೇಂದ್ರವಿಲ್ಲದಿದ್ದರೂ ಸಹಿತ ಪ್ರತಿದಿನ ಪಟ್ಟಣದಲ್ಲಿ ಅಕ್ರಮ ಮರುಳು ದಂಧೆ ಅವ್ಯಾಹಿತವಾಗಿ ನಡೆಯುತ್ತಿದ್ದು, ಅಕ್ರಮ ಮರುಳು ದಂಧೆಗೆ ಕಡಿವಾಣ ಯಾವಾಗ ? ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮರುಳು ದಂಧೆಕೋರರಿಂದ ತುಂಗಭದ್ರೆಯ ಒಡಲು ಬರಿದಾಗುತ್ತಿದೆ. ಕಂಪ್ಲಿ-ಕೋಟೆ ಮತ್ತು ತಾಲ್ಲೂಕಿನ ಸರಹದ್ದಿನಲ್ಲಿ ತುಂಗಭದ್ರಾ ನದಿ ಹರಿದು ಹೋಗಿದ್ದು, ಈ ಭಾರಿ ಜಲಾಶಯದ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರನ್ನು ನಿರಂತರವಾಗಿ ನದಿಗೆ ಬಿಟ್ಟ ಪರಿಣಾಮ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದ್ದು. ಮರಳುದಂಧೆ ಕೋರರಿಗೆ ಅಕ್ರಮವಾಗಿ ಮರಳು ಸಾಗಾಟಕ್ಕೆ ಅನುಕೂಲವಾಗಿದೆ.
ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಕಂಪ್ಲಿ ಭಾಗದಲ್ಲಿ ಮತ್ತು ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಭಾಗದಲ್ಲಿ ಪ್ರತಿದಿನ ಬೆಳಗಿನ ಜಾವವೇ ಹಲವಾರು ಹರಗೋಲಿನ ಮೂಲಕ ಮರಳನ್ನು ತೆಗೆಯುವ ಕಾಯಕ ನಿರಂತರವಾಗಿ ನಡೆಯುತ್ತದೆ. ನದಿಯಿಂದ ಹರಗೋಲಿನ ಮುಲಕ ತರುವ ಮರಳನ್ನು ನದಿ ತೀರದಲ್ಲಿ ಸಂಗ್ರಹಿಸಿ ಅದನ್ನು ಎತ್ತಿನ ಬಂಡಿಗಳ ಮೂಲಕ, ಟ್ರ್ಯಾಕ್ಟರ್ ಗಳ ಮೂಲಕ ಬೇರೆಡೆಗೆ ಸಾಗಿಸಿ ಅಲ್ಲಿಂದ ಟಿಪ್ಪರ್‌ಗಳ ಮೂಲಕ ಸಾಗಾಟ ಮಾಡುತ್ತಿರುವ ಸಂಗತಿಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಪಟ್ಟಣದಲ್ಲಿ ಸರ್ಕಾರದ ಅಧಿಕೃತ ಮರಳು ಕೇಂದ್ರವಿಲ್ಲದಿದ್ದರೂ ಸಹಿತ ಪ್ರತಿದಿನ ಹಲವಾರು ಬೃಹತ್ ಟಿಪ್ಪರ್‌ಗಳಲ್ಲಿ, ಲಾರಿಗಳಲ್ಲಿ, ಟ್ರಾಕ್ಟರ್‌ಗಳಲ್ಲಿ ಮತ್ತು ಎತ್ತಿನ ಬಂಡಿಗಳಲ್ಲಿ ಮರಳು ಸಾಗಾಟವಾಗುತ್ತಿದ್ದರೂ ಸಹಿತ ಸಂಬAಧಪಟ್ಟ ಅಧಿಕಾರಿಗಳು ಮಾತ್ರ ತಮಗೇನೂ ಗೊತ್ತಿಲ್ಲದಂತೆ ವರ್ತಿಸುತ್ತಿರುವುದನ್ನು ನೋಡಿದರೆ ಸಾರ್ವಜನಿಕರಲ್ಲಿ ಸಂಶಯ ಮೂಡುವಂತೆ ಮಾಡಿದೆ.
ಬೆಳಿಗ್ಗೆ ಮರಳು ಸಂಗ್ರಹಿಸುವವರು ಅದನ್ನು ಸುರಕ್ಷಿತ ಪ್ರದೇಶದಲ್ಲಿ ದಾಸ್ತಾನು ಮಾಡಿ ನಂತರ ಸಂಜೆ, ರಾತ್ರಿ ಹಾಗೂ ಬೆಳಗಿನ ಜಾವದ ಸಮಯದಲ್ಲಿ ಬೃಹತ್ ವಾಹನಗಳ ಅಗತ್ಯಕ್ಕೆ ತಕ್ಕಂತೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
ಪಟ್ಟಣದ ಕೆಲವು ಬಡಾವಣೆಗಳಲ್ಲಿ ರಾತ್ರಿ ಹಾಗೂ ಬೆಳಗಿನ ಜಾವ ಬೃಹತ್ ವಾಹನಗಳಲ್ಲಿ ಮರಳು ಸಾಗಾಟ ಮಾಡುತ್ತಿರುವುದರಿಂದ ಬಡಾವಣೆಯ ಜನತೆ ರೋಸಿ ಹೋಗಿದ್ದಾರೆ. ಮರಳು ತುಂಬಿದ ವಾಹನಗಳನ್ನು ವೇಗವಾಗಿ ಓಡಿಸುವುದರಿಂದ ಚಿಕ್ಕಚಿಕ್ಕ ಮಕ್ಕಳು, ವೃದ್ಧರ ಪರಿಸ್ಥಿತಿ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ಅಕ್ರಮ ಮರಳು ದಂದೆ ಕೆಲವರಿಗೆ ಅನುಕೂಲವಾಗಿದ್ದರೆ ಮತ್ತೆ ಕೆಲವರಿಗೆ ಪ್ರಾಣ ಸಂಕಟವಾಗಿದೆ.
ಇತ್ತೀಚೆಗೆ ಕಂಪ್ಲಿಗೆ ಭೇಟಿ ನೀಡಿದ್ದ ಬಳ್ಳಾರಿ ಸಹಾಯಕ ಆಯುಕ್ತರಾಗಿರುವ ಎಚ್.ಡಿ ರಾಜೇಶ್ ಅವರು ತಾಲ್ಲೂಕಿನ ಸಣಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ಕಾರದಿಂದ ಮರಳು ಕೇಂದ್ರವನ್ನು ಗುರುತಿಸಲಾಗಿದ್ದು, ಆದಷ್ಟು ಶೀಘ್ರವಾಗಿ ಟೆಂಡರ್ ಕರೆಯಲಾಗುವುದು ತಿಳಿಸಿದ್ದರು. ಹಾಗೂ ಅಕ್ರಮ ಮರಳು ಸಾಗಾಟದ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಆದರೂ, ಕಂಪ್ಲಿ ಪಟ್ಟಣದಲ್ಲಿ ಅಕ್ರಮ ಮರಳು ದಂದೆಗೆ ಮಾತ್ರ ಕಡಿವಾಣ ಇಲ್ಲದಂತಾಗಿದೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಇದ್ದು ಇಲ್ಲದಂತಾಗಿದೆ.
=====ಕೋಟ್====
ಕಂಪ್ಲಿ-ಕೋಟೆಯಲ್ಲಿ ಬೆಳಗಿನ ಜಾವದ ವೇಳೆಯಲ್ಲಿ ಹರಗೋಲಿನಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಹರಗೋಲು ಮಾಲೀಕರಿಗೆ ಅಕ್ರಮವಾಗಿ ಮರಳು ತೆಗೆಯದಂತೆ ಸೂಚಿಸಲಾಗಿದೆ. ಆದರೂ, ಇನ್ನು ಅಕ್ರಮ ಮರಳುದಂಧೆ ನಡೆಯುತ್ತಿದ್ದು, ಶೀಘ್ರವಾಗಿ ದಾಳಿ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಜೂಗಲ್ ಮಂಜುನಾಯಕ, ತಹಶೀಲ್ದಾರ್, ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್


