ದೇವದುರ್ಗ, ಏ.17: ಇಂದಿನ ವೇಗದ ಜೀವನಶೈಲಿಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಹಾಗೂ ಇತರರ ಮಾನಸಿಕ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಫಾದರ್ ಜಾನ್ ಪೌಲ್ ಹೇಳಿದರು.

ಪಟ್ಟಣದಲ್ಲಿ ಬ್ರೆಂಡ್ಸ್ ಸಂಸ್ಥೆ ಬೆಂಗಳೂರು, ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆ ದೇವದುರ್ಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪೋಷಣೆ ಅಭಿವೃದ್ಧಿ ಮತ್ತು ಬೆಂಬಲಕ್ಕಾಗಿ ಮಾನಸಿಕ ಆರೋಗ್ಯ ಉಪಕ್ರಮ ಯೋಜನೆಯಡಿ ಆಯೋಜಿಸಿದ ಕಲಾತ್ಮಕ ಆಟ ಮತ್ತು ವೃತ್ತಿಪರ ಚಿಕಿತ್ಸೆಗಳ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಮಾನಸಿಕ ಸದೃಢತೆ, ಆತ್ಮವಿಶ್ವಾಸ ಹಾಗೂ ಏಕಾಗ್ರತೆ ಬೆಳೆಸುವುದು ಶಿಕ್ಷಕರು, ಪೋಷಕರು ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಮನಸ್ಸು ಮತ್ತು ಮೆದುಳಿನ ಸಮತೋಲನ ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿ ಅಗತ್ಯವಿದೆ ಎಂದರು.

ಪೌಷ್ಟಿಕ ಆಹಾರ ಸೇವನೆ, ಸಮರ್ಪಕ ನಿದ್ರೆ ಹಾಗೂ ಪರಸ್ಪರ ಭಾವನೆಗಳಿಗೆ ಗೌರವ ನೀಡುವುದು ಉತ್ತಮ ಮಾನಸಿಕ ಆರೋಗ್ಯದ ಮೂಲ ಅಂಶಗಳಾಗಿವೆ ಎಂದು ಹೇಳಿದರು.

ಸಿದ್ದಲಿಂಗಪ್ಪ ಕಾಕರಗಲ್ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ 50 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಈಗಾಗಲೇ ಆರು ಅಧಿವೇಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಬೇಸಿಗೆ ಅವಧಿಯಲ್ಲಿಯೂ ಮಕ್ಕಳ ಸಾಮರ್ಥ್ಯ ಅಭಿವೃದ್ಧಿಗಾಗಿ ಕಾರ್ಯಗಾರಗಳನ್ನು ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಿತ್ರ ಮಾನಸಗಲ್, ಕು. ರೇಣುಕಾ ಗೋಪಾಳಾಪುರ, ಆಪ್ತ ಸಮಾಲೋಚಕ ಶ್ರೀಮಂತ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ತನುಶ್ರೀ ಮತ್ತು ಕು. ಶಿವಗಂಗಮ್ಮ ಉಪಸ್ಥಿತರಿದ್ದರು.

ಕು. ಮಧು ಪ್ರಾರ್ಥನೆ ಸಲ್ಲಿಸಿದರು. ಶ್ರೀಮಂತ ಸ್ವಾಗತಿಸಿ, ಭಗವಂತರಾಯ ತೆಗ್ಗಿಹಾಳ ವಂದಿಸಿದರು.


Leave a Reply

Your email address will not be published. Required fields are marked *