ಸಿರವಾರ: ಸರಳತೆ, ಸಜ್ಜನಿಕೆ ಹಾಗೂ ಜನಸೇವೆ ಎಂಬ ಮೂರು ಮೌಲ್ಯಗಳನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದ ಸಮಾಜಮುಖಿ ವ್ಯಕ್ತಿತ್ವ ಕೃಷ್ಣನಾಯಕ ಅವರ ಅಗಲಿಕೆಯ ಸುದ್ದಿ ಸಿರವಾರ ಪಟ್ಟಣದ ಜನರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸುರಪುರ ತಾಲೂಕಿನ ಶಾಂತಪುರ ಸಮೀಪ ಸಂಭವಿಸಿದ ಕಾರು ಹಾಗೂ ವಿ .ಆರ್.ಎಲ್ ಬಸ್ ಭೀಕರ ರಸ್ತೆ ಅಪಘಾತದಲ್ಲಿ ಕೃಷ್ಣನಾಯಕ, ಅವರ ಧರ್ಮಪತ್ನಿ, ಮಗಳು, ಅಳಿಯ, ಸೊಸೆ ಹಾಗೂ ಮೊಮ್ಮಕ್ಕಳು ದುರ್ಮರಣ ಹೊಂದಿರುವುದು ಅತೀವ ದುಃಖಕರ ಸಂಗತಿಯಾಗಿದೆ.
ಸಿರವಾರ ಪಟ್ಟಣದ ಸ್ವಚ್ಛತೆ ಮತ್ತು ಅಭಿವೃದ್ಧಿಗಾಗಿ ಸದಾ ಮುಂಚೂಣಿಯಲ್ಲಿ ನಿಂತಿದ್ದ ಅವರು “ಸ್ವಚ್ಛ ಸಿರವಾರ” ಕನಸನ್ನು ಸಾಕಾರಗೊಳಿಸಲು ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರು. ಪ್ರತಿದಿನ ಬೆಳಗಿನ ಜಾವವೇ ಎದ್ದು ಒಂದು ಗಂಟೆ ಕಾಲ ಪಟ್ಟಣ ಸ್ವಚ್ಛತೆಗೆ ತೊಡಗಿಸಿಕೊಳ್ಳುತ್ತಿದ್ದ ಅವರ ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿದಾಯಕವಾಗಿತ್ತು.
ಜನರೊಂದಿಗೆ ಆತ್ಮೀಯವಾಗಿ ಬೆರೆತು, ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದ ಕೃಷ್ಣನಾಯಕ ಅವರು ಸಿರವಾರ ಜನರ ಮನಸ್ಸಿನಲ್ಲಿ ಅಳಿಸಲಾಗದ ಗುರುತು ಮೂಡಿಸಿದ್ದಾರೆ. ಅವರ ಅಗಲಿಕೆ ಸಿರವಾರ ತಾಲೂಕಿಗೆ ತುಂಬಲಾರದ ನಷ್ಟವಾಗಿದ್ದು, ಸಮಾಜಸೇವೆಯೊಂದು ದೊಡ್ಡ ಶೂನ್ಯವನ್ನು ಬಿಟ್ಟು ಹೋಗಿದೆ.
ಅವರ ಅಗಲಿಕೆಯ ನೋವು ಕುಟುಂಬ ವರ್ಗದವರಿಗೆ, ಅಪ್ತ ಬಂಧುಗಳಿಗೆ ಹಾಗೂ ಸಿರವಾರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಅಸಹನೀಯವಾಗಿದೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಭಗವಂತನು ಎಲ್ಲರಿಗೂ ನೀಡಲಿ ಎಂದು ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.



