ಮಾನವಿ : ಕೂಲಿ ಕಾರ್ಮಿಕರು ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯಡಿ ಮಾನ್ವಿ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಕೆಲಸಗಳನ್ನು ನೀಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಅಹಮದ್ ತಿಳಿಸಿದ್ದಾರೆ. ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 78 ಕಾಮಗಾರಿಗಳು ಪ್ರಗತಿಯಲ್ಲಿ ಇದ್ದು, 5721ಕ್ಕೂ ಹೆಚ್ಚು ಅಪ್ರಶಿಕ್ಷಿತ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ಯೋಗಕ್ಕಾಗಿ ಕೂಲಿ ಕಾರ್ಮಿಕರಿಂದ ನಮೂನೆ-06 ಅರ್ಜಿಗಳನ್ನು ಪಡೆದು ಕೆಲಸ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ನಗರಗಳಿಗೆ ವಲಸೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಾದಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಕಲ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ NMMS ತಂತ್ರಾಂಶದ ಮೂಲಕ ಫೇಸ್ ಆಥೆಂಟಿಕೇಶನ್ ಬಳಸಿ ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂದು ತಿಳಿಸಲಾಯಿತು. ಗಂಡು-ಹೆಣ್ಣು ಇಬ್ಬರಿಗೂ ದಿನಕ್ಕೆ 370 ರೂ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ದೊರೆಯುತ್ತದೆ.
ಇದಲ್ಲದೆ, ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಮತ್ತು ಜೀವನ್ ಜ್ಯೋತಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇಕಡಾ 50% ಕೆಲಸ ಮಾಡಿದರೂ ಪೂರ್ಣ ಕೂಲಿ ನೀಡುವ ವ್ಯವಸ್ಥೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಿಗೆ NMMS ಹಾಜರಾತಿಯನ್ನು ಕಡ್ಡಾಯವಾಗಿ ಎರಡು ಬಾರಿ ದಾಖಲಿಸುವಂತೆ ಸೂಚನೆ ನೀಡಲಾಯಿತು.

