ತಾಳಿಕೋಟಿ: ಹಿರಿಯರ ಮಾರ್ಗದರ್ಶನ ಮತ್ತು ಪ್ರೀತಿಯ ಕೊರತೆಯಿಂದಾಗಿ ನಮ್ಮಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಕಡಿಮೆಯಾಗುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಹೆಚ್ಚು ಸ್ವಾರ್ಥಿಗಳಾಗುತ್ತಿದ್ದೇವೆ ಸೇವಾ ಮನೋಭಾವನೆ ಕಡಿಮೆಯಾಗಿದೆ ಇದರಿಂದಾಗಿ ಸಂಬಂಧಗಳಿಗೆ ಸಾಕಷ್ಟು ಕೊರತೆ ಉಂಟಾಗಿದೆ ಗ್ರಾಮೀಣ ಜಾತ್ರಾ ಮಹೋತ್ಸವ ಪುರಾಣ ಪ್ರವಚನಗಳು ಹಾಗೂ ಧಾರ್ಮಿಕ ಕಾರ್ಯಗಳಿಂದ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ ನಮ್ಮ ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಳಿಕೋಟಿ ತಾಲೂಕಿನ ಸುಕ್ಷೇತ್ರ ಶಳ್ಳಗಿ ಗ್ರಾಮದಲ್ಲಿ ಶ್ರೀ ಬಲವಂತರಾಯ ಹಾಗೂ ಶ್ರೀ ಪರಮಣ್ಣ ಮುತ್ಯಾ ಅವರ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಂಡ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಹಾನ್ ದಾಸೋಹಿ ಕಲ್ಬುರ್ಗಿ ಶ್ರೀ ಶರಣಬಸವೇಶ್ವರ ಅವರ ಪುರಾಣ ಪ್ರವಚನದಲ್ಲಿ ಇವತ್ತು ಅವರ ವಿವಾಹ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಶರಣರ ಮಹಾತ್ಮರ ಸಂತರ
ಬದುಕು ನಮಗೆ ದಾರಿದೀಪವಾಗಿದೆ ಆ ಮಾರ್ಗದಲ್ಲಿ ನಡೆದು ನಾವು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಬಂದು ಜೀವನ ಸಾರ್ಥಕಗಳಿಸಿಕೊಳ್ಳಬಹುದಾಗಿದೆ ಎಂದ ಅವರು ಸಣ್ಣ ಸಣ್ಣ ವಿಷಯಗಳಿಗಾಗಿ ಮನಸ್ತಾಪವನ್ನು ಮಾಡಿಕೊಳ್ಳದೆ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಿ ಒಂದು ದಿನ ನಮಗೆಲ್ಲರಿಗೂ ಈ ಲೋಕವನ್ನು ತ್ಯಜಿಸಬೇಕಾಗಿದೆ ಹೋಗುವಾಗ ನಮ್ಮ ಜೊತೆ ಬರುವುದು ಕೇವಲ ನಮ್ಮ ಒಳ್ಳೆಯ ಕರ್ಮಗಳು ಮಾತ್ರ ಬದುಕಿರುವಷ್ಟು ದಿನ ದ್ವೇಷ ಹಗೆತನವನ್ನು ಬಿಟ್ಟು ಪ್ರೀತಿ ಸಹಬಾಳ್ವೆಯಿಂದ ಬದುಕಲು ಪ್ರಯತ್ನಿಸಿ ಎಂದರು. ಯಾಳಗಿ ಗ್ರಾಮದ ಖ್ಯಾತ ಪುರಾಣಿಕ ವೇದ ಮೂರ್ತಿ ಬಸಯ್ಯ ಸೋಮಶೇಖರಯ್ಯಮಠ ಪುರಾಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಪಾರ ಮಹಿಳೆಯರು ಶ್ರೀ ಶರಣಬಸವೇಶ್ವರ ಅವರ ವಿವಾಹ ಮಹೋತ್ಸವವನ್ನು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಕೇತಿಕವಾಗಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಹಿರಿಯರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *