ಮಾನ್ವಿ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಮಾನ್ವಿ ನಗರದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಬಾಬಾಸಾಹೇಬರ ವೃತ್ತದಲ್ಲಿ ಆಯೋಜಿಸಲಾದ ಮೆರವಣಿಗೆಗೆ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಹಂಪಯ್ಯ ನಾಯಕ್ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರಗಳೊಂದಿಗೆ, ಘೋಷಣೆಗಳು ಮತ್ತು ಬ್ಯಾಂಡ್‌ ವಾದ್ಯಗಳ ನಡುವೆ ನಡೆದ ಮೆರವಣಿಗೆಗೆ ಅಪಾರ ಜನಸ್ತೋಮ ಸಾಕ್ಷಿಯಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಶಾಸಕರು ಉದ್ಘಾಟಿಸಿ ಮಾತನಾಡಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಪ್ರತಿಬಿಂಬಿಸುವ ಮಹಾನ್ ದಸ್ತಾವೇಜು ಎಂದು ಅವರು ಹೇಳಿದರು. ಸಮಾಜದ ಪ್ರತಿಯೊಬ್ಬರೂ ಸಮಾನ ಅವಕಾಶಗಳನ್ನು ಪಡೆಯುವಂತಹ ವ್ಯವಸ್ಥೆಯನ್ನು ನಿರ್ಮಿಸುವುದು ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ತಿಳಿಸಿದರು.
ಸಮಾಜದ ಹಿಂದುಳಿದ, ನೊಂದ ಹಾಗೂ ಶೋಷಿತ ವರ್ಗಗಳ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಯುವಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇತಿಹಾಸವನ್ನು ಅರಿತುಕೊಂಡಾಗ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಗ್ಯಾರಂಟಿಗಳ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಮಾಜಿ ಶಾಸಕರಾದ ರಾಜ ವೆಂಕಟಪ್ಪ ನಾಯಕ್, ಗುಡದಿನ್ನಿ ಶರಣಯ್ಯ ನಾಯಕ್, ಶಿವರಾಜ್ ನಾಯಕ ವಕೀಲರು, ಸೈಯದ್ ನಜರುದ್ದೀನ್ ಖಾದ್ರಿ, ರೌಡ್ರು ಮಹಾಂತೇಶ್ ಸ್ವಾಮಿ, ಗುಮ್ಮ ಬಸವರಾಜ್ ವಕೀಲರು, ಗೋಪಾಲ್ ನಾಯಕ್, ಜಿ. ನಾಗರಾಜ್, ಸೈಯದ್ ಖಾಲಿದ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ್, ಚಾಂದ್ ಪಾಶಾ ಗುತ್ತೇದಾರ್, ಜಯಪ್ರಕಾಶ್, ಶಿವರಾಜ್ ಉಮಳಿ ಹೊಸೂರು, ಸತ್ತರ ಬಂಗ್ಲೆವಾಲೆ, ಎಂ.ಡಿ. ಮಹೆಮ್ಮದ್, ಅಬ್ಬು ಪಟೇಲ್, ಕಾಮೇಶ್ ಮದುಕಲ್, ಹಂಪಯ್ಯ ನಾಯಕ್, ಶಂಕರ್ ಜಗ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *