ಮಸ್ಕಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕ ಕಸಬಾ ಹೋಬಳಿ ಅಲ್ಲೇನಹಳ್ಳಿ-ಮಲ್ಲೆನಹಳ್ಳಿ ಗ್ರಾಮದ ಕೋಟಿ ಬೆಲೆ ಬಾಳುವ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಮಾಡಿರುವ ಮಂಜೂರಾತಿಗಳನ್ನು ಪಡಿಸಬೇಕೆಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ್)ಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ನಂತರ ಸಂತೋಷ ಹಿರೇದಿನ್ನಿ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಅಲ್ಲೇನಹಳ್ಳಿ-ಮಲ್ಲೇನಹಳ್ಳಿ ಜೋಡಿ ಗ್ರಾಮಗಳ ಸರ್ವೆ ನಂ. ೩೭ರಲ್ಲಿ ಸರಕಾರಿ ಹಾಗೂ ಸಾರ್ವಜನಿಕರ ಭೂಮಿಯಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಪಟ್ಟಿ ಹಾಗೂ ಸಾಗುವಳಿಯಲ್ಲಿದ್ದು, ಈ ಪೈಕಿ ೩೭೫ ಎಕರೆ ಗಾಯರಾಣ ಮತ್ತು ೮೪ ಎಕರೆ ಬಿ ಖಾರಾಬ ಭೂಮಿ ಇದ್ದು, ಸರ್ವೆ ನಂ. ೯೭ರ ೮೩೫ ಎಕರೆ ೩೪ ಗುಂಟೆ ಭೂವಿಯು ನೆಲಗಳ್ಳರಾದ ಎಂಎಸ್ ರಾಮಯ್ಯ ಅವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾವಣೆ ಆಗಿದೆ. ಸದರಿ ಸರ್ವೇ ನಂಬರ್ ನಲ್ಲಿ ತಮ್ಮ ಪಟ್ಟದ ಜಮೀನು ಹಾಗೂ ಭೂ ರಹಿತರ ಸಾಗುವಳಿ ಕಳೆದುಕೊಂಡ ಈ ಗ್ರಾಮಗಳ ರೈತರು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಒಕ್ಕೂಟ’ ಅಡಿಯಲ್ಲಿ ೧೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಇವರೆಲ್ಲ ಸ್ವಂತ ಹಾಗೂ ಸರ್ಕಾರಿ ಭೂಮಿಯಿಂದ ಹೊರ ಹಾಕಲ್ಪಟ್ಟ ನಿರಾಶ್ರಿತರಾಗಿದ್ದಾರೆ. ಇವರ ಪರವಾಗಿ, ಕರ್ನಾಟಕ ರಾಷ್ಟ್ರ ಪಕ್ಷವೂ ಶಕ್ತಿಮೀರಿ ಹೋರಾಡುತ್ತಿದೆ. ಕರ್ನಾಟಕ ಕಂದಾಯ ಕಾಯ್ದೆ, ಅರಣ್ಯ ಕಾಯ್ದೆಗಳು, ಭೂ ಕಬಳಿಕೆ ಪ್ರತಿಬಂಧಕ ಕಾಯ್ದೆಗಳು, ಭೂ ಮಂಜೂರಾತಿ ಕಾಯ್ದೆಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಭೂಮಿ ವಿಲೇವಾರಿ ಪ್ರತಿಬಂಧಕ ಕಾಯ್ದೆಗಳು, ನಗರ ಪ್ರದೇಶ ಭೂ ಸುಧಾರಣಾ ಕಾಯ್ದೆಗಳು ಉಲ್ಲಂಘನೆಯಾಗಿವೆ. ಆದ್ದರಿಂದ ದೇವನಹಳ್ಳಿ ತಹಶೀಲ್ದಾರರ ಮೂಲಕ ನೀಡಲಾದ ಎಲ್ಲಾ ಭೂ ಮಂಜುರಾತಿಗಳನ್ನು ರದ್ದುಪಡಿಸಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಪಟ್ಟ ಹಾಗೂ ಸರ್ಕಾರಿ ಸಾಗುವಳಿ ಭೂಮಿಯನ್ನು ತ್ವರಿತ ಗತಿಯಲ್ಲಿ ಹಿಂದಿರುಗಿಸಬೇಕು. ಭೂ ಕಬಳಿಕೆ ಪ್ರಕರಣವನ್ನು ತಾವು ನಿರ್ಲಕ್ಷಿಸಿದಲ್ಲಿ ತಮ್ಮ ಆಡಳಿತದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬೆಟ್ಟದಜ್ಜ ಬಸಾಪೂರ, ವೆಂಕಟೇಶ ಚಿಲ್ಕರಾಗಿ, ಮಾರುತಿ ಜಿನ್ನಾಪೂರ, ಮಾಳಪ್ಪ, ಆಮರೇಶ ಪಾಮನಕಲ್ಲೂರು, ಹುಲುಗಪ್ಪ ಚಿಲ್ಕರಾಗಿ, ಬಾಲಸ್ವಾಮಿ ಇತರರಿದ್ದರು.

Leave a Reply

Your email address will not be published. Required fields are marked *