ಮಾನ್ವಿ : ಮಾನ್ವಿ ವಿಧಾನಸಭಾ ಕ್ಷೇತ್ರದ ಮಾನ್ವಿ ನಗರದ ಬಾಶುಮಿಯ ಸಾಹುಕಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ರಾಯಚೂರು ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಅಭಿವೃದ್ಧಿ ಸಮಿತಿಯ ಸಭೆಯನ್ನು ಶಾಸಕ ಜಿ. ಹಂಪಯ್ಯ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಏಪ್ರಿಲ್ 27, 28 ಹಾಗೂ 29 ರಂದು ನಡೆಯಲಿರುವ ಯುವಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ ಸಂದರ್ಭದಲ್ಲಿ ಎಲ್ಲರ ಸಮನ್ವಯದಿಂದ ಬಿ ಪ್ಲಸ್ ಗ್ರೇಡ್ ಲಭಿಸಿರುವುದು ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಸುಮಾರು 187 ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾವಿರಾರು ಯುವಜನರು ಮಾನ್ವಿಗೆ ಆಗಮಿಸಲಿದ್ದಾರೆ. ಇದರಿಂದ ಮಾನ್ವಿ ನಗರಕ್ಕೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮಟ್ಟದಲ್ಲಿ ವಿಶೇಷ ಗುರುತಿನ ಅವಕಾಶ ದೊರೆಯಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಮರ್ಪಕ ವಸತಿ, ಶುದ್ಧ ಕುಡಿಯುವ ನೀರು, ಊಟ, ಸಾರಿಗೆ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಅತ್ಯಂತ ಮುಖ್ಯವಾಗಿದ್ದು, ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳು, ಶಾಲಾ ಕಟ್ಟಡಗಳು ಹಾಗೂ ಖಾಸಗಿ ಸಂಸ್ಥೆಗಳ ಸಹಕಾರ ಪಡೆಯುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರೀಕ್ಷಾ ದಿನಾಂಕಗಳ ಗೊಂದಲ ಕುರಿತು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಜಿಶನ್ ಅಖಿಲ್ ಸಿದ್ದಿಕಿ, ಯುವಜನೋತ್ಸವವು ಮಾನ್ವಿಗೆ ಸಿಕ್ಕಿರುವ ಅಪರೂಪದ ಅವಕಾಶವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಒಂದಾಗಿ ಕಾರ್ಯನಿರ್ವಹಿಸಿದರೆ ರಾಜ್ಯಮಟ್ಟದಲ್ಲಿ ಮಾನ್ವಿಯ ಹೆಸರು ಮೂಡಿಬರುತ್ತದೆ ಎಂದು ಹೇಳಿದರು.
ಸಿಡಿಸಿ ಸದಸ್ಯರಾದ ರೇವಣಸಿದ್ದಯ್ಯ ಹಿರೇಮಠ್, ನಿವೃತ್ತ ಶಿಕ್ಷಣಾಧಿಕಾರಿ ಡಿ.ಜೆ. ಕರ್ಕೆಹಳ್ಳಿ, ಆಂಜಿನೇಯ ನಸಲಾಪುರ ಸೇರಿದಂತೆ ಹಲವರು ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚ ಗ್ಯಾರಂಟಿಗಳ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಸೈಯದ್ ಅಕ್ಬರ್ ಪಾಷಾ ಹುಸೇನಿ, ಶ್ರೀಮತಿ ಮಧು ಕುಮಾರಿ ಪಾಂಡೆ, ವೆಂಕೋಬಯ್ಯ ಶೆಟ್ಟಿ, ಶಂಕರ್ ಜಗ್ಲಿ, ಸತ್ತರ್ ಬಂಗ್ಲೆವಾಲೆ, ತಾಲೂಕ ದಂಡಾಧಿಕಾರಿ ಭೀಮರಾಯ್ ರಾಮಸಮುದ್ರ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಾಮನೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯ ನಾಯಕ್, ಕೆಇಬಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಪ್ರಾಚಾರ್ಯ ಎ.ಎಲ್. ಈರಣ್ಣ, ಮಿನಾಜುಲ್ ಹಸನ್, ಮುಜೀಬ್ ಅಹಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

