ನಗರದ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ, ಭದ್ರತೆ ಒದಗಿಸಬೇಕು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ವೇದಿಕೆ ವತಿಯಿಂದ ಘಟಕ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.

ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಆದರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ-ಭದ್ರತೆ ಇಲ್ಲದಂತಾಗಿದೆ. ಸದಾ ಜನದಟ್ಟಣೆಯಿಂದ ತುಂಬಿ ತುಳುಕುವ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ನಿರ್ವಹಣೆ ಸಮಸ್ಯೆ ಎದ್ದು ಕಾಣುತ್ತಿದ್ದು, ಗೌಜು-ಗದ್ದಲದ ನಡುವೆ ಪ್ರಯಾಣಿಕರು ಅಭದ್ರತೆಯಲ್ಲಿ ಪ್ರಯಾಣಿಸುತ್ತಾರೆ. ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಕಲಬುರ್ಗಿ ಮಾರ್ಗದ ಪ್ರಮುಖ ಬಸ್ ನಿಲ್ದಾಣ ಆಗಿರುವುದರಿಂದ ದಿನವೂ ಸಾವಿರಾರು ಪ್ರಯಾಣಿಕರು ಇಲ್ಲಿಂದ ಹಲವು ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ.

ಶಕ್ತಿ ಯೋಜನೆಯಿಂದಾಗಿ ದಿನವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿರುತ್ತದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಿಲ್ದಾಣದ ಆವರಣದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಸುರಕ್ಷತೆಗೆ ಕೆಕೆಆರ್‌ಟಿಸಿ ಕ್ರಮ ಕೈಗೊಳ್ಳದಿರುವುದರಿಂದ ಪ್ರಯಾಣಿಕರು ದಿನವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಾ.16ರಂದು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸಾರಿಗೆ ಸಂಸ್ಥೆ ಬಸ್ಸೊಂದು ಹರಿದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬೇವಿನಾಳ ಗ್ರಾಮದ ದೊಡ್ಡ ಈರಮ್ಮ ಬಸಣ್ಣ (38) ಧಾರುಣವಾಗಿ ಮೃತಪಟ್ಟಿದ್ದು, ಇದು ಇಲಾಖೆಯ ಆಡಳಿತ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಗಳ ಗಮನ ಸೆಳೆದರು.

ನಗರದಲ್ಲಿ ಪದವಿ ಪೂರ್ವ ಹಾಗೂ ಪದವಿ ವ್ಯಾಸಂಗದ ಅಂದಾಜು 40ಕ್ಕೂ ಹೆಚ್ಚು ಕಾಲೇಜುಗಳಿವೆ. ಹಾಗಾಗಿ ದಿನವೂ ಗ್ರಾಮೀಣ ಪ್ರದೇಶದಿಂದ 5 ರಿಂದ 6 ಸಾವಿರ ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಸಿಂಧನೂರು ನಗರಕ್ಕೆ ಆಗಮಿಸುತ್ತಾರೆ. ಅದರಲ್ಲಿ ಬಹುತೇಕ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಮೂಲಕ ತಮ್ಮ ಗ್ರಾಮಗಳಿಗೆ ತೆರಳುವುದರಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನ ವ್ಯಾಪಕ ದಟ್ಟಣೆ ಇರುತ್ತದೆ. ಬಸ್ ನಿಲ್ದಾಣಕ್ಕೆ ಕಾಂಪೌಂಡ್ ಇಲ್ಲ ಹೀಗಾಗಿ ಅನಧಿಕೃತ ವಾಹನಗಳು ಕೂಡ ಒಳಗಡೆ ಪ್ರವೇಶಿಸುತ್ತವೆ.

ಇನ್ನೂ ಬಹುತೇಕ ಬಸ್ ಚಾಲಕರು ಮೊಬೈಲ್‌ನಲ್ಲಿ ಮಾತನಾಡುತ್ತಲೇ ನಿಲ್ದಾಣದಲ್ಲಿ ಬಸ್ ಚಲಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅಪಘಾತವಾದರೆ ಯಾರು ಹೊಣೆ ? ವಿವಿಧ ಮಾರ್ಗದ ಸಾರಿಗೆ ಬಸ್‌ಗಳು ಒಳ ಪ್ರವೇಶ ಮತ್ತು ಹೊರಗಡೆ ಹೋಗುವಾಗ ವಿಪರೀತ ಸಮಸ್ಯೆ ಆಗುತ್ತಿದೆ. ಮುಖ್ಯ ರಸ್ತೆಯನ್ನು ಹಲವರು ಅತಿಕ್ರಮಿಸಿರುವುದೇ ಇದಕ್ಕೆ ಕಾರಣ. ಆದರೆ ಈ ಬಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯವರಾಗಲಿ, ಟ್ರಾಫಿಕ್‌ನವರಾಗಲಿ ಗಮನ ಹರಿಸುತ್ತಿಲ್ಲ ಮತ್ತು ಕಠಿಣ ಕ್ರಮಕ್ಕೂ ಸಹ ಮುಂದಾಗುತ್ತಿಲ್ಲ.

ನಿಲ್ದಾಣದಲ್ಲಿ ಮದ್ಯ ವ್ಯಸನಿಗಳ ಹಾವಳಿಯಂತೂ ಮಿತಿಮೀರಿದೆ, ಪ್ರಯಾಣಿಕರು ಸಂಚರಿಸುವ ಕಡೆಗೆ ಎಲ್ಲೆಂದರಲ್ಲಿ ಮಲಗುವುದು, ಅನುಚಿತವಾಗಿ ವರ್ತಿಸುವುದು ಮಾಡುತ್ತಾರೆ. ಇದರಿಂದ ಸಾರ್ವಜನಿಕರು ಮುಜುಗರ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಯಿಂದ ಅಳವಡಿಸಿದ ಕಬ್ಬಿಣದ ಸರಳುಗಳು ಎಲ್ಲೆಂದರಲ್ಲಿ ಮುರಿದು ಹೋಗಿವೆ. ಇನ್ನೂ ದೊಡ್ಡ ಬಸ್ ನಿಲ್ದಾಣವಾಗಿದ್ದರೂ ಕೂಡ ಕೂಡಲು ಆಸನ ಕೊರತೆಯಿಂದ ವೃದ್ಧರು, ವಿಕಲಚೇತನರು, ಗರ್ಭಿಣಿಯರು ಹಾಗೂ ಬಾಣಂತಿಯರು ಸಮಸ್ಯೆ ಅನುಭವಿಸುವಂತಾಗಿದೆ. ಆದರೆ ಈ ಬಗ್ಗೆ ಸಾರಿಗೆ ಸಂಸ್ಥೆಯವರು ಸೌಲಭ್ಯ ಒದಗಿಸಲು ಮುಂದಾಗಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬಸ್ ನಿಲ್ದಾಣದಿಂದ ಕುಷ್ಟಗಿ ಮಾರ್ಗದ ಕಡೆಗೆ ಸಾರಿಗೆ ಬಸ್‌ಗಳು ಹೊರಗೆ ತೆರಳುವ ಮಾರ್ಗ ಅತ್ಯಂತ ಕಿರಿದಾಗಿದ್ದು, ಈ ಮಾರ್ಗದಲ್ಲಿ ಪ್ರಯಾಣಿಕರು ಅಂಗೈಯಲ್ಲಿ ಜೀವವಿಡಿದು ನಿಲ್ದಾಣ ಪ್ರವೇಶಿಸುತ್ತಾರೆ. ಒಂದು ಕಡೆಗೆ ಅಂಬಾದೇವಿ ದೇವಸ್ಥಾನವಿದ್ದು, ಇನ್ನೊಂದು ಕಡೆಗೆ ವಾಣಿಜ್ಯ ಮಳಿಗೆಗಳು ಇರುವುದರಿಂದ ಪ್ರವೇಶ ದ್ವಾರ ಇಕ್ಕಟ್ಟಾಗಿದೆ. ಇನ್ನೂ ರಾಯಚೂರು-ಬಳ್ಳಾರಿ ಮಾರ್ಗದಿಂದ ನಿಲ್ದಾಣ ಪ್ರವೇಶಿಸುವ ದ್ವಾರದಲ್ಲೇ ತಗ್ಗು-ದಿನ್ನೆಗಳು ಬಿದ್ದಿವೆ. ಹಂಪ್ ಇಲ್ಲದ ಕಾರಣ ಅತಿವೇಗವಾಗಿ ಬಸ್‌ಗಳು ನಿಲ್ದಾಣ ಪ್ರವೇಶಿಸುವುದರಿಂದ ಪ್ರಯಾಣಿಕರು ಎದ್ದೆನೋ ಬಿದ್ದೆನೋ ಎಂದು ಓಡುವಂತಾಗಿದೆ. ಅಲ್ಲದೇ ವೃದ್ಧರು, ವಿಕಲಚೇತನರು ಹಾಗೂ ಚಿಕ್ಕಮಕ್ಕಳು ನಿಲ್ದಾಣದಿಂದ ಸುರಕ್ಷಿತವಾಗಿ ಹೊರಗಡೆ ಬರಲು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಬಸ್ ನಿಲ್ದಾಣದ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಎರಡೂ ಪ್ರವೇಶ ದ್ವಾರಗಳಲ್ಲಿ ಕಾವಲುಗಾರರನ್ನು ನೇಮಿಸಬೇಕು ಹಾಗೂ ಕಬ್ಬಿಣದ ಸರಳಿನ ಪಾದಾಚಾರಿ ಮಾರ್ಗವನ್ನು ನಿರ್ಮಿಸಿ ಪ್ರಯಾಣಿಕರು ಸುಲಭವಾಗಿ ಸಂಚರಿಸಲು ಕೂಡಲೇ ಅನುಕೂಲ ಕಲ್ಪಿಸಬೇಕು, ದಿನವೂ ಗ್ರಾಮೀಣ ಪ್ರದೇಶದ ಅಂದಾಜು 5ರಿಂದ 6 ಸಾವಿರ ವಿದ್ಯಾರ್ಥಿಗಳು ಬಸ್ ನಿಲ್ದಾಣವನ್ನು ಪ್ರವೇಶಿಸಿ ಆ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಿದ್ದು, ಅವರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಬಸ್ ನಿಲ್ದಾಣದಲ್ಲಿ ಮದ್ಯ ವ್ಯಸನಿಗಳು ಮದ್ಯ ಕುಡಿದು ಎಲ್ಲೆಂದರಲ್ಲಿ ಮಲಗುವುದು, ಪ್ರಯಾಣಿಕರ‌ ಜೊತೆಗೆ ಅನುಚಿತವಾಗಿ ವರ್ತಿಸುವುದಲ್ಲದೇ ಅರೆ-ಬರೆ ಬಟ್ಟೆಗಳನ್ನು ಧರಿಸಿ ಮುಜುಗರ ಅನುಭವಿಸುವಂತೆ ವರ್ತಿಸುತ್ತಿದ್ದು, ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

ಸಿಂಧನೂರು ಬಸ್ ನಿಲ್ದಾಣಕ್ಕೆ ದಿನವೂ ಸಾವಿರಾರು ಪ್ರಯಾಣಿಕರು ಆಗಮಿಸುವುದರಿಂದ ಆಸನಗಳ ಕೊರತೆ ಇದ್ದು, ಇನ್ನಷ್ಟು ಆಸನಗಳ ಸೌಲಭ್ಯ ಒದಗಿಸಬೇಕು, ವಿಕಲಚೇತನರು, ಅಂಧರು, ಮಕ್ಕಳು ಹಾಗೂ ವಯೋವೃದ್ಧ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಸೂಕ್ತ ಸೌಲಭ್ಯ ಒದಗಿಸಬೇಕು ಹಾಗೂ ಸುರಕ್ಷತೆಯನ್ನು ಖಚಿತ ಪಡಿಸಬೇಕು, ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು, ಕುಷ್ಟಗಿ ಮಾರ್ಗದ ಕಡೆಗೆ ಸಾರಿಗೆ ಬಸ್‌ಗಳು ತೆರಳುವ ದ್ವಾರ (ಅಂಬಾದೇವಿ ಗುಡಿಯ ಪಕ್ಕದ ದಾರಿ) ಅತ್ಯಂತ ಚಿಕ್ಕದಾಗಿದ್ದು, ಈ ಮಾರ್ಗದಲ್ಲಿ ಬಸ್ ಹಾಗೂ ಪ್ರಯಾಣಿಕರು ಸಂಚರಿಸಲು ಸಮಸ್ಯೆಯಾಗಿದ್ದು, ಹಾಗಾಗಿ ಈ ಮಾರ್ಗವನ್ನು ಅಗಲೀಕರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.

ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ಬಹಳಷ್ಟು ನಿಲುಗಡೆ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು, ಬಸ್ ನಿಲ್ದಾಣದಲ್ಲಿ ಪಾದಾಚಾರಿ ಮಾರ್ಗದಲ್ಲಿ ಬೈಕ್ ಹಾಗೂ ಕಾರು ಪಾರ್ಕಿಂಗ್ ಮಾಡದಂತೆ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ಸಾರಿಗೆ ಇಲಾಖೆ ಅಧಿಕಾರಿ ಅಮರೇಶ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಇ.ಎಚ್.ನಾಯಕ್, ತಾಲೂಕು ಸಂಚಾಲಕ ದುರುಗೇಶ ಸಾನಬಾಳ, ವಿದ್ಯಾರ್ಥಿಗಳಾದ ಪ್ರದೀಪ್, ಭೀಮೇಶ್, ಸ್ವಾಮಿ ನಾಯಕ್, ದುರುಗಪ್ಪ, ವಿನೋದ್ ಕುಮಾರ್, ಶರಣಬಸವ, ಶಾಂಭವಿ, ಶಾರದ ನಾಯಕ್, ಐಶ್ವರ್ಯ, ಶರಣ್, ಅಡಿವೇಶ, ಸುದೀಪ್, ರಂಜಾನ್ ಸಾಬ್, ದರ್ಶನ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *