ಕೃಷಿ ಕೂಲಿಕಾರ್ಮಿಕರು ಸಂಘಟಿತರಾಗಿ ಸರ್ಕಾರದಿಂದ ಶಾಸನಬದ್ಧವಾಗಿ ದೊರೆಯುವ ಸೌಕರ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ (ಆಯರ್ಲಾ) ರಾಜ್ಯ ಸಂಚಾಲಕ ನಾಗರಾಜ ಪೂಜಾರ್ ಹೇಳಿದರು.
ತಾಲೂಕಿನ ದಢೇಸುಗೂರು ಗ್ರಾಮದಲ್ಲಿ ಶುಕ್ರವಾರ ಆಯರ್ಲಾ ಗ್ರಾಮ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರಿಗೆ ನಿಗದಿತ ಕೂಲಿ ಮತ್ತು ಆದಾಯ ಇಲ್ಲ. ಇದರಿಂದ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಗೂ ನಿರುದ್ಯೋಗ ಸಮಸ್ಯೆ, ಅನಾರೋಗ್ಯ ಇವರನ್ನು ಬಾಧಿಸುತ್ತಿವೆ. ಕೃಷಿ ಸೇರಿ ಗ್ರಾಮೀಣ ಪ್ರದೇಶದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುವ ಕೃಷಿ ಕೂಲಿಕಾರ ಕುಟುಂಬಗಳು ಇಂದಿಗೂ ಹಸಿವಿನಿಂದ ಬಳಲುತ್ತಿವೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕೃಷಿ ಕೂಲಿಕಾರ್ಮಿಕರನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಅಲ್ಪಸ್ವಲ್ಪ ಆಸರೆಯಾಗಿದ್ದ, ಮನರೇಗಾ ಯೋಜನೆ ಬದಲಿಸಿ, ಜಿರಾಮ್‌ಜಿ ಯೋಜನೆ ಜಾರಿಗೊಳಿಸುವ ಮೂಲಕ ಉದ್ಯೋಗದ ಹಕ್ಕನ್ನೇ ಕಸಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ವಿಜಯರ್ ದೊರೈರಾಜು ಮಾತನಾಡಿ, ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ಮನೆಗೊಂದು ಶೌಚಾಲಯ ಎಂದು ಅಭಿಯಾನ ನಡೆಸುತ್ತವೆ. ಮನೆಯೇ ಇಲ್ಲದವರಿಗೆ ಶೌಚಾಲಯ ಎಲ್ಲಿಂದ ಬರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದುಡಿಯುವ ಜನ ವಿರೋಧಿ ಕಾಯ್ದೆಯ ಕಾನೂನುಗಳನ್ನು ಜಾರಿಗೆ ತಂದು, ತಾವು ಜನಪರ ಎಂದು ಬಿಂಬಿಸುತ್ತಿವೆ. ಇದನ್ನು ಗ್ರಾಮೀಣ ಪ್ರದೇಶದ ಕೂಲಿಕಾರರು ಅರಿತುಕೊಳ್ಳಬೇಕು ಎಂದರು.
ಗ್ರಾಮ ಘಟಕ ರಚನೆ:
ದಢೇಸುಗೂರು ಆಯರ್ಲಾ ಗ್ರಾಮ ಘಟಕದ ನೂತನ ಅಧ್ಯಕ್ಷರನ್ನಾಗಿ ವೀರಭದ್ರಪ್ಪ, ಉಪಾಧ್ಯಕ್ಷರಾಗಿ ತುಳಸಪ್ಪ, ಆರೀಫ್, ಕಾರ್ಯದರ್ಶಿಯಾಗಿ ಮಂಜಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಸುಂಕಪ್ಪ, ನಾಗೇಶ, ಶಿವಪ್ಪ, ಗೌರವಾಧ್ಯಕ್ಷರಾಗಿ ಮುದಿಯಪ್ಪ , ಖಜಾಂಚಿ ವಿನಯ್ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ: ಆಯರ್ಲಾ ಜಿಲ್ಲಾ ಘಟಕ ಸಹ ಸಂಚಾಲಕ ರಾಘವೇಂದ್ರ ಉಪ್ಪಳ, ಸಿಪಿಐಎಂಎಲ್ ಲಿಬರೇಶನ್ ತಾಲ್ಲೂಕು ಘಟಕ ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಪಂಪಾಪತಿ ಸೇರಿದಂತೆ ಇನ್ನಿತರರು ಇದ್ದರು. ಆಯರ್ಲಾ ಜಿಲ್ಲಾ ಸಂಚಾಲಕ ಆರ್.ಎಚ್.ಕಲಮಂಗಿ ಕಾರ್ಯಕ್ರಮ ನಿರ್ವಹಿಸಿದರು.


