ಜಾಲಹಳ್ಳಿ : ಪ್ರವಾಸಿ ಮಂದಿರದಲ್ಲಿ ಇಂದು ನೈಜ್ಯ-ದೆಸೆ ಕನ್ನಡ ದಿನಪತ್ರಿಕೆ ವರದಿಗಾರರೊಂದಿಗೆ ಜೊತೆ ಮಾತನಾಡಿದ ಪಕ್ಷಾತೀತ ಪ್ರಗತಿಪರ ರೈತರ ಒಕ್ಕೂಟದ ಮುಖಂಡರಾದ ಶ್ರೀ ವೀರಣ್ಣ ಬಳೆ ಸಾಹುಕಾರ್ ಅವರು, ಜಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಕುರಿತು ಪ್ರತಿಕ್ರಿಯಿಸಿದರು.
ಅವರು ಮಾತನಾಡುತ್ತಾ, ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಮುಖಂಡರ ಒಗ್ಗಟ್ಟಿನಿಂದ 12 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದರು. ಈ ಗೆಲುವಿಗೆ ಒಗ್ಗಟ್ಟು ಮುಖ್ಯ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುಮಾರು 35 ವರ್ಷಗಳಿಂದ ಸಹಕಾರ ಸಂಘಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದು, ರೈತರಿಗೆ ಅನುಕೂಲವಾಗುವಂತೆ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಂಘವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ರೈತರು ನೇರವಾಗಿ ಮನೆಗೆ ಬಂದು ಯಾರಿಗೆ ಮತ ಹಾಕಬೇಕು ಎಂದು ಕೇಳುವ ಮಟ್ಟಿಗೆ ನಂಬಿಕೆ ಗಳಿಸಿದ್ದೇವೆ ಎಂದರು.
ಇದಲ್ಲದೆ, ಎಲ್ಲಾ ಪಕ್ಷದ ಮುಖಂಡರು ಸೇರಿ ಪಕ್ಷಾತೀತ ಪ್ರಗತಿಪರ ರೈತರ ಒಕ್ಕೂಟವನ್ನು ನಿರ್ಮಿಸಿದ್ದು, ಈ ಒಕ್ಕೂಟಕ್ಕೆ ರೈತರು ಬಹುಮತ ನೀಡಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಮಾಜಿ ಕಾರ್ಯದರ್ಶಿಯ ಕುತಂತ್ರದಿಂದ ತಮಗೆ ಅನರ್ಹತೆ ಉಂಟಾದರೂ, ನ್ಯಾಯಾಲಯಕ್ಕೆ ಹೋಗುವ ಬದಲು ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಹೇಳಿದರು.
ಕೊನೆಯಲ್ಲಿ, ತಮ್ಮ ಒಕ್ಕೂಟದ ಜಯಕ್ಕೆ ಕಾರಣರಾದ ಎಲ್ಲಾ ರೈತ ಬಂಧುಗಳು ಹಾಗೂ ಮುಖಂಡರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತರಾಯ, ಖುರ್ಷಿದ್ ಪಟೇಲ್, ರಾಜ್ ಮಹಮ್ಮದ್ ಸಾಬ್ ಕಾಲೆಗರ್ ಉಪಸ್ಥಿತರಿದ್ದರು.

