ರಾಯಚೂರು ಏಪ್ರಿಲ್ 08 (ಕರ್ನಾಟಕ ವಾರ್ತೆ): ಪ್ರಸ್ತುತ ಮುಂಗಾರು ಹಂಗಾಮಿನಿಂದ ರೈತರು ಯೂರಿಯಾ ರಸಗೊಬ್ಬರ ಖರೀದಿ ಮಾಡಲು ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿರುವ ಹೊಸ ಕೆ-ಕಿಸಾನ್ ತಂತ್ರಾಂಶದ ಮೂಲಕವೇ ರೈತರ ಎಫ್.ಐ.ಡಿ. ಸಂಖ್ಯೆ ಮತ್ತು ಆಧಾರ ಕಾರ್ಡ್ ಬಳಸಿಕೊಂಡು ರೈತರು ಹೊಂದಿರುವ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಎಷ್ಟು ಪ್ರಮಾಣದ ಯೂರಿಯಾ ಅಗತ್ಯವಿದೆಯೋ ಅಷ್ಟನ್ನು ಮಾತ್ರ ರೈತರು ಖರೀಧಿಸಲು ಹಾಗೂ ರಸಗೊಬ್ಬರ ಮಾರಾಟಗಾರರು ರೈತರಿಗೆ ವಿತರಿಸಲು ಅವಕಾಶವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ್ ಚೌವ್ಹಾಣ ಅವರು ತಿಳಿಸಿದ್ದಾರೆ.
ಇಲಾಖೆಯ ಕೆ-ಕಿಸಾನ್ ತಂತ್ರಾಂಶದ ಮೂಲಕವೇ ಎಫ್.ಐ.ಡಿ ದಾಖಲಿಸಿ ಯೂರಿಯಾ ರಸಗೊಬ್ಬರ ವಿತರಿಸಬೇಕು. ಎಫ್.ಐ.ಡಿ. ಹೊಂದಿಲ್ಲದ ರೈತರು ತಕ್ಷಣವೇ ತಮ್ಮ ಪಹಣಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಎಫ್.ಐ.ಡಿ. ಸೃಜಿಸಿಕೊಳ್ಳಬೇಕು. ಈಗಾಗಲೇ ಎಫ್.ಐ.ಡಿ. ಹೊಂದಿರುವ ರೈತರು ತಮ್ಮ ಎಲ್ಲ ಸರ್ವೇ ನಂಬರ್‌ಗಳನ್ನು ಅದಕ್ಕೆ ಜೋಡಣೆ ಮಾಡಬೇಕು.
ರೈತರ ನೋಂದಣಿ ಮತ್ತು ಫಲಾನುಭವಿ ಮಾಹಿತಿ ವ್ಯವಸ್ಥೆ ಮೂಲಕ ರೈತರ ವೈಯಕ್ತಿಕ ವಿವರ, ಭೂಮಿ ವಿವರ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆಯ ಮಾಹಿತಿಯನ್ನೊಳಗೊಂಡ ಎಫ್.ಐ.ಡಿ ಅನ್ವಯ ರೈತರ ಜಮೀನಿನ ವಿಸ್ತೀರ್ಣ ಹಾಗೂ ಬೆಳೆಗೆ ತಕ್ಕಂತೆ ಯೂರಿಯಾ ಪ್ರಮಾಣ ಅಗತ್ಯ ಇರುವಷ್ಟು ಮಾತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ರೈತರಲ್ಲದವರು ಆಧಾರ್ ಬಳಸಿ / ಬೇರೆ ರೈತರ ಎಫ್. ಐ.ಡಿ ಬಳಸಿ ರಸಗೊಬ್ಬರ ಖರೀದಿಸಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿ ಮಾಡುವ ಪ್ರಕರಣ ಕೃಷಿಯೇತರ ಚಟುವಟಿಕೆಗಳಿಗೆ ರಸಗೊಬ್ಬರ ಬಳಕೆ ಮಾಡುವಂತ ಪ್ರಕರಣ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ, ಅನಧಿಕೃತ ದಾಸ್ತಾನು / ಬಳಕೆಯ/ ಇತರೆ ಕಾನೂನು ಬಾಹಿರ ಚಟುವಟಿಗಳ ಬಗ್ಗೆ, ನಿಗಾವಹಿಸಲು ಜಿಲ್ಲಾ ಸಮಿತಿ ರಚನೆಯಾಗಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭೂಮಿಯ ಫಲವತ್ತತೆ ಹಾಗೂ ಮಣ್ಣಿನ ಆರೋಗ್ಯದ ಹಿತದೃಷ್ಟಿಯಿಂದ ರೈತರು ಅನಗತ್ಯವಾಗಿ ಹೆಚ್ಚಿನ ರಸಗೊಬ್ಬರ ಬಳಕೆ ಮಾಡದೆ ಬೆಳೆಗೆ ಅನುಗುಣವಾಗಿ ಮಿತವಾಗಿ ರಸಗೊಬ್ಬರ ಬಳಸಬೇಕೆಂಬ ಉದ್ದೇಶದಿಂದ ಇಲಾಖೆಯು ಈ ಕ್ರಮ ಜಾರಿಗೆ ತಂದಿದೆ. ಅಲ್ಲದೆ, ರೈತರು ಇತರೆ ಸಾವಯವ ಗೊಬ್ಬರ, ಜೈವಿಕ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಬಳಸುವಂತೆ ತಿಳಿಸಿದೆ.
ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್.ಐ.ಡಿ. ನಮೂದಿಸಿ ಯೂರಿಯಾ ಮಾರಾಟ ಮಾಡಬೇಕು. ಒಂದು ವೇಳೆ ‘ಓ’ ಫಾರಂ ನವೀಕರಿಸದೆ ಮಾರಾಟ ಮಾಡಿದರೆ, ನಿಗದಿಪಡಿಸಿದ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಿದರೆ ಅಥವಾ ಕೃಷಿಯೇತರ ಉದ್ದೇಶಗಳಿಗೆ ಸರಬರಾಜು ಮಾಡುವುದು. ಇತರ ಕಾನೂನುಬಾಹಿರ ಚುಟುವಟಿಕೆ ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

