ರಾಯಚೂರು ಏಪ್ರಿಲ್ 08 (ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿAದ 2025-26ನೇ ಸಾಲಿನಲ್ಲಿ ಶೇ.100ರಷ್ಟು ತೆರಿಗೆ ಸಂಗ್ರಹಣೆಯ ಗುರಿಯನ್ನು ಸಾಧಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ರಾಯಚೂರಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರಿಗೆ ಪ್ರಶಂಸಾ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ.
ಈ ಸಾಧನೆಗೆ ಶ್ರಮಿಸಿದ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪರಿಶ್ರಮ ಮತ್ತು ಕಾರ್ಯನಿಷ್ಠೆಯನ್ನು ಪ್ರಶಂಸಿಸುತ್ತೇನೆ. ಈ ಸಾಧನೆ ವ್ಯವಸ್ಥಿತವಾದ ಯೋಜನೆ, ಪರಿಣಾಮಕಾರಿ ಸಮನ್ವಯ ಹಾಗೂ ನಿರಂತರ ಪರಿಶ್ರಮದ ಫಲವಾಗಿದ್ದು, ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ. ಈ ಮಹತ್ವದ ಸಾಧನೆಗೆ ನೇತೃತ್ವ ನೀಡಿದ ನಿಮಗೆ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲು ಹರ್ಷಿಸುತ್ತೇನೆ. ಈ ಸಾಧನೆಯನ್ನು ಸ್ಥಿರಪಡಿಸಿಕೊಳ್ಳುವುದರ ಜೊತೆಗೆ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತೀರೆಂದು ಆಶಿಸುತ್ತೇನೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರು ಪ್ರಶಂಸಾ ಪತ್ರದಲ್ಲಿ ತಿಳಿಸಿದ್ದಾರೆ.

