ಸಿರವಾರ,ಏ.07- ತಾಲೂಕಿನ ಹರವಿ ಗ್ರಾಮ ಪಂಚಾಯತಿಯ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ದಾಖಲೆಗಳನ್ನು ನೀಡುವಂತೆ (ಆರ್.ಟಿ.ಐ) ಕಾಯ್ದೆಯಡಿ ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದರೂ ಸಹ, ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಪಿಡಿಒ ಪ್ರದೀಪ್ ಪಾಟೀಲ್ ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು (ಆರ್.ಟಿ.ಐ) ಕಾರ್ಯಕರ್ತ ಹೆಚ್.ರೆಡ್ಡಿ ಅವರು ಆರೋಪಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಮಂಗಳವಾರ ಪತ್ರಿಕೆ ಪ್ರಕಟಣೆಯಲ್ಲಿ (ಆರ್.ಟಿ.ಐ) ಕಾರ್ಯಕರ್ತ ಹೆಚ್.ರೆಡ್ಡಿ ಮಾತನಾಡಿ, ಸಿರವಾರ ತಾಲೂಕಿನ ಹರವಿ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಸಿಮೆಂಟ್ ಚೇರ್ ಅಳವಡಿಕೆ, ಸೋಲಾರ್ ಬೀದಿ ದೀಪಗಳ ಅಳವಡಿಕೆ, ಜಂಗಲ್ ಕಟಿಂಗ್, ಅಂಗನವಾಡಿ ಕೇಂದ್ರ ದುರಸ್ಥಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನೀಡುವಂತೆ ಫೆ.12 ರಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಕೂಡ, ಸಕಾಲದಲ್ಲಿ ಕೋರಿದ ಮಾಹಿತಿ ದಾಖಲೆಗಳನ್ನು ನೀಡದೆ ಪಿಡಿಒ ಪ್ರದೀಪ್ ಅವರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ:
ಸಾರ್ವಜನಿಕ ಪ್ರಾಧಿಕಾರವಾಗಿರುವ ಹರವಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪಿಡಿಒ ಪ್ರದೀಪ್ ಪಾಟೀಲ್ ಪ್ರಥಮ ಮೇಲ್ಮನವಿ ಅಧಿಕಾರಿಯಾಗಿದ್ದು, ಸರ್ಕಾರದ ಯೋಜನೆಗಳ ಮಾಹಿತಿ, ಅನುದಾನ ಬಳಕೆ, ಕಾಮಗಾರಿಗಳ ಬಿಲ್ ದಾಖಲೆಗಳನ್ನು ನೀಡುವಂತೆ (ಆರ್.ಟಿ.ಐ) ಕಾಯ್ದೆಯಡಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಪಿಡಿಒ ಪ್ರದೀಪ್ ಪಾಟೀಲ್ ಉದ್ದೇಶ ಪೂರ್ವಕವಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಭ್ರಷ್ಟಾಚಾರದ ವಾಸನೆ?
ಹರವಿ ಗ್ರಾಮ ಪಂಚಾಯತಿಯ 2023-24ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕಳೆದ ಜನವರಿ-ಫೆಬ್ರವರಿ ತಿಂಗಳಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ವಹಿಸಿ ಅಂದಾಜು 10 ಲಕ್ಷ ರೂ. ಸರ್ಕಾರದ ಹಣ ಎತ್ತುವಳಿ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಕಾಮಗಾರಿಗಳ ಗುಣಮಟ್ಟ ಮತ್ತು ಅನುಷ್ಠಾನದ ಬಗ್ಗೆ ಹಲವು ಸಂಶಯಗಳಿವೆ. ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಬಹಿರಂಗಪಡಿಸಿದರೆ ಪಂಚಾಯತಿಯ ಅಕ್ರಮಗಳು ಬಯಲಾಗುತ್ತವೆ ಎಂಬ ಭಯದಿಂದ ಪಿಡಿಒ ಪ್ರದೀಪ್ ರವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಸಾರ್ವಜನಿಕರ ಕರೆ ಸ್ವೀಕರಿಸದ ಪಿಡಿಒ:
ಪಂಚಾಯತ್ ವ್ಯಾಪ್ತಿಯ ಸಮಸ್ಯೆ ಮತ್ತು ಜನರ ಕೆಲಸ ಕಾರ್ಯಗಳನ್ನು ಪಿಡಿಒ ಅವರ ಗಮನಕ್ಕೆ ತರಲು ಸರ್ಕಾರ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಪಿಡಿಒ ಪ್ರದೀಪ್ ರವರು ಸಾರ್ವಜನಿಕರು, ಪತ್ರಕರ್ತರು ಮತ್ತು ಸಂಘ ಸಂಸ್ಥೆಗಳ ಮುಖಂಡರ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಕೇವಲ ತಮಗೆ ಬೇಕಾದವರೊಂದಿಗೆ ಖಾಸಗಿ ದೂರವಾಣಿಯೊಂದಿಗೆ ಮಾತಾಡಿಕೊಂಡು ಫೋನ್ ಸ್ವೀಚ್ ಆಫ್ ಇಡುತ್ತಾರೆ ಎಂದು ತಿಳಿಸಿದ್ದಾರೆ.
ಪಿಡಿಒ ಮೇಲೆ ಕ್ರಮಕ್ಕೆ ಒತ್ತಾಯ:
ಆರ್.ಟಿ.ಐ ಕಾಯ್ದೆಯಡಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಸತಾಯಿಸುತ್ತ ಪಿಡಿಒ ಪ್ರದೀಪ್ ಪಾಟೀಲ್ (ಆರ್.ಟಿ.ಐ) ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಪಿಡಿಒ ರವರು ಈ ತಂತ್ರ ಅನುಸರಿಸುತ್ತಿದ್ದಾರೆ. ಆದ್ದರಿಂದ ಜಿ.ಪಂ ಸಿಇಒ ಹಾಗೂ ತಾ.ಪಂ ಇಒ ರವರು ಈ ಬಗ್ಗೆ ಗಮನಹರಿಸಿ ಕೂಡಲೇ ಪಿಡಿಒ ಪ್ರದೀಪ್ ಪಾಟೀಲ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್.ಟಿ.ಐ ಕಾರ್ಯಕರ್ತ ಹೆಚ್.ರೆಡ್ಡಿ ರವರು ಪತ್ರಿಕೆ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

