ತಾಲೂಕಿನ ಬೂದಿವಾಳ ಗ್ರಾಮದ ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘದ ಜೋಳ ಖರೀದಿ ಕೇಂದ್ರದಲ್ಲಿ ರೈತರಿಂದ ಗ್ರೇಡರ್ ಗಳು ಪ್ರತಿ ಕ್ವಿಂಟಾಲ್ ಗೆ 10 ರೂ. ಲಂಚ ಕೇಳುತ್ತಿದ್ದಾರೆ. ಮೊದಲೇ ಜೋಳ ಖರೀದಿ ಕೇಂದ್ರವನ್ನು ತಡವಾಗಿ ಪ್ರಾರಂಭಿಸಿದ್ದು, ಒಂದು ಕಡೆಯಾದರೆ, ಇನ್ನೊಂದು ಕಡೆಗೆ ಜೋಳ ಕಪ್ಪಿದೆ, ನುಸಿ ಬಿದ್ದಿವೆ, ಹುಳ ಕಾಣಿಸ್ತಿವೆ, ಎಂದು ಸಬೂಬು ಹೇಳಿ ರೈತರಿಂದ ಹಣ ಕಿತ್ತುವ ಕಿತಾಪತಿ ಪ್ಲಾನ್ ಗ್ರೇಡರ್ ಗಳಿಂದ ಆಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಹನುಮಂತ ಗೋಡಿಹಾಳ ಆರೋಪ ಮಾಡಿದರು.
ತಾಲೂಕಿನ ಬೂದಿವಾಳ ಗ್ರಾಮದಲ್ಲಿ ಮಂಗಳವಾರ ಗ್ರೇಡರ್ ಗಳು ಜೋಳ ಖರೀದಿ ಮಾಡಲು ಪ್ರತಿ ಕ್ವಿಂಟಾಲ್ ಗೆ 10 ರೂ.ಲಂಚಕ್ಕೆ ಬೇಡಿಕೆಯಿಟ್ಟ ಗ್ರೇಡರ್ ಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಹಣ ಕೊಡಲು ಆಗುವುದಿಲ್ಲ ಎಂದರೆ ಅವರ ಜೋಳವನ್ನು ಗ್ರೇಡರ್ ಗಳು ಖರೀದಿ ಮಾಡುವುದಿಲ್ಲ.
ಈ ಕಾರಣವಾಗಿ ರೈತರು ಮತ್ತು ಗ್ರೇಡರ್ ಗಳ ಜೊತೆ ಮಾತಿನ ಚಕಮಕಿ ನಡೆದ ಕಾರಣ ಏಕಾಏಕಿ ಗ್ರೇಡರ್ ಮತ್ತು ಹರಟೇನೂರು ಗ್ರಾಮದ ರೈತರಾದ ರಾಜಪ್ಪ ಕುಂಬಾರ ಇವರ ನಡುವೆ ವಾಗ್ವಾದ ನಡೆದು ರೈತ ರಾಜಪ್ಪನ ಮೇಲೆ ಗ್ರೇಡರ್ ಹಲ್ಲೆ ನಡೆಸಿ ರೈತನ ಬಟ್ಟೆ ಹರಿದ ಘಟನೆ ಜರುಗಿದೆ. ಈ ವಾಗ್ವಾದ ವಿಚಾರವನ್ನ ಮತ್ತು ಖರೀದಿ ಕೇಂದ್ರಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಘಟನೆಗಳನ್ನು ತಿಳಿಸಲು ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿಯವರಿಗೆ ಫೋನ್ ಕರೆ ಮಾಡಿದರೆ, ಕರೆಗೆ ಸರಿಯಾಗಿ ಸ್ಪಂದಿಸದೆ ಫೋನ್ ಕರೆ ಕಟ್ ಮಾಡಿದರು ಎಂದು ದೂರಿದರು.
ಇದರಿಂದಾಗಿ ರೈತರು ಮತ್ತಷ್ಟು ಆಕ್ರೋಶಗೊಂಡು ರಸ್ತೆಯಲ್ಲೇ ಜೋಳ ತುಂಬಿದ ಟ್ರಾಕ್ಟರ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ರೈತನ ಮೇಲೆ ಹಲ್ಲೆ ಮಾಡಿದ ಗ್ರೇಡರ್ ನನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕು, ಸರ್ಕಾರ ಖರೀದಿ ಕೇಂದ್ರಗಳನ್ನು ಬಹಳ ದಿನದ ನಂತರ ಪ್ರಾರಂಭ ಮಾಡಿ ಈಗ ಇಲ್ಲ ಸಲ್ಲದ ಕುಂಟುನೆಪವೊಡ್ಡಿ, ಪ್ರತಿಯೊಬ್ಬ ರೈತರಿಂದ ಪ್ರತಿ ಕ್ವಿಂಟಾಲ್ ಗೆ ಇಂತಿಷ್ಟು ಹಣ ಕೊಡಬೇಕು ಎಂದು ಗ್ರೇಡರ್ ಗಳು ಲಂಚ ವಸೂಲಿಗೆ ಇಳಿದಿದ್ದಾರೆ ಜಿಲ್ಲೆಯ ಪ್ರತಿ ಜೋಳ ಖರೀದಿ ಕೇಂದ್ರಗಳಲ್ಲೂ ನಡೆಯುತ್ತಿದೆ ಇಂತಹ ಸುಲಿಗೆ, ಇದಕ್ಕೆಲ್ಲಾ ಸರ್ಕಾರವೇ ನೇರಹೊಣೆ
ತಾಲೂಕಿನ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡಿ ರೈತರಿಂದ ಹಣ ಸುಲಿಗೆ ಮಾಡುವುದು ತಡೆಗಟ್ಟಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ ಮಾಡಿತು. ಪ್ರತಿಭಟನಾ ಸ್ಥಳಕ್ಕೆ ಸಿಪಿಐ ಆಗಮಿಸಿ ಗಲಾಟೆ ತಿಳಿಗೊಳಿಸಿದರು.
ಇದೇ ವೇಳೆ: ಬೂದಿವಾಳ, ಮಾಡಸಿರವಾರ, ಬೆಳಗುರ್ಕಿ, ಅಲಬನೂರು, ಉದ್ಬಾಳ, ಗ್ರಾಮಗಳ ನೂರಾರು ಜನ ರೈತರು ದಿಢೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


