ಸಿಂಧನೂರು : ಚುನಾವಣೆ ಪೂರ್ವ ಸಂದರ್ಭದಲ್ಲಿ ಮಾದಿಗ ಕ್ಷೇಮಾಭಿವೃದ್ಧಿ ಸಂಘಕ್ಕೆ ನೀಡಿದ್ದ ಭರವಸೆಯನ್ನು ನಿಷ್ಠೆಯಿಂದ ಈಡೇರಿಸುವ ಭಾಗವಾಗಿ, ಹಸಿರು ಕ್ರಾಂತಿಯ ಹರಿಕಾರ, ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಹಾನ್ ಸಮಾಜ ಸೇವಕರಾದ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯ ಪವಿತ್ರ ದಿನದಂದು ರೈಲ್ವೆ ನಿಲ್ದಾಣದ ಸಮೀಪ ಸರ್ಕಾರದ 1 ಎಕರೆಯ ಭೂಮಿಯಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ (ಕಲ್ಯಾಣ ಮಂಟಪ) ನಿರ್ಮಾಣ ಕಾಮಗಾರಿಗೆ ಶಾಸಕ ಹಂಪನಗೌಡ ಬಾದರ್ಲಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿ ಸರ್ಕಾರದ ಯೋಜನೆಗಳ ಮೂಲಕ ಮಾತ್ರ ಸಾಧ್ಯವಲ್ಲ; ಜನಪ್ರತಿನಿಧಿಗಳು ಹಾಗೂ ಸಮಾಜದ ಸಹಕಾರದೊಂದಿಗೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಮಾದಿಗ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕುಟುಂಬ ಸಮಾರಂಭಗಳಿಗೆ ಶಾಶ್ವತ ವೇದಿಕೆ ಒದಗಿಸುವ ಉದ್ದೇಶದಿಂದ ಈ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಡಿ 1.69 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿರುವುದಾಗಿ ತಿಳಿಸಿ, ಕಾಮಗಾರಿಯನ್ನು ವಿಳಂಬವಿಲ್ಲದೆ ಪ್ರಾರಂಭಿಸಿ ಗುಣಮಟ್ಟದ ಕೆಲಸವನ್ನು ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರು, ಯುವ ಮುಖಂಡರು, ಮಹಿಳಾ ಪ್ರತಿನಿಧಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂತೋಷ ವ್ಯಕ್ತಪಡಿಸಿದರು. ಸಮಾಜದ ಪರವಾಗಿ ಮಾನ್ಯ ಶಾಸಕರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಮುದಾಯ ಭವನ ನಿರ್ಮಾಣದಿಂದ ಸಮಾಜದ ಐಕ್ಯತೆ ಮತ್ತಷ್ಟು ಬಲವಾಗಲಿದೆ ಹಾಗೂ ಭವಿಷ್ಯದ ಪೀಳಿಗೆಗೆ ಉಪಯುಕ್ತವಾದ ಮೂಲಸೌಕರ್ಯ ಸಿಗಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಸ್ಥಳೀಯ ಜನರು ಈ ಯೋಜನೆಗೆ ಸಂತೋಷ ವ್ಯಕ್ತಪಡಿಸಿ, ಸಮಾಜದ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವು ಹರ್ಷೋಲ್ಲಾಸದ ವಾತಾವರಣದಲ್ಲಿ ನೆರವೇರಿತು.

Leave a Reply

Your email address will not be published. Required fields are marked *