ಮಾನ್ವಿ :
ಗದಗ ರೈಲ್ವೆ ನಿಲ್ದಾಣಕ್ಕೆ “ಶ್ರೀ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ” ಅವರ ಪವಿತ್ರ ಹೆಸರು ನಾಮಕರಣ ಮಾಡುವಂತೆ ವಿನಂತಿಸುವ ಮನವಿಯನ್ನು ಸಂಕಲ್ಪ ವಿಕಲಚೇತನರ ಒಕ್ಕೂಟದ ವತಿಯಿಂದ ಇಂದು ಮಾನ್ವಿ ತಹಸೀಲ್ದಾರರ ಮೂಲಕ ರಾಯಚೂರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಕಲ್ಪ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್ ಅವರು ಹೀಗಂದರು:
“ಪುಟ್ಟರಾಜ ಗವಾಯಿಗಳವರು ದಿವ್ಯಾಂಗ ಸಮುದಾಯಕ್ಕೆ ಮಾತ್ರವಲ್ಲ, ಸಂಪೂರ್ಣ ಸಮಾಜಕ್ಕೆ ದಾರಿ ತೋರಿಸಿದ ಮಹನೀಯರು. ಅವರ ಜೀವನವೇ ಸೇವೆ, ತ್ಯಾಗ ಮತ್ತು ಮಾನವೀಯತೆಯ ನಿದರ್ಶನ. ಅಂತಹ ಮಹನೀಯರ ನಾಮವನ್ನು ಗದಗ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಿದರೆ ಅದು ಕರ್ನಾಟಕದ ಹೆಮ್ಮೆ, ದಿವ್ಯಾಂಗರ ಗೌರವ” ಎಂದು ಹೇಳಿದರು.

ಮುಂದುವರಿಸಿ, “ಸಮಾಜದಲ್ಲಿ ದಿವ್ಯಾಂಗರಿಗಾಗಿ ಗವಾಯಿಗಳವರು ಮಾಡಿದ ಸೇವೆ ಅಮೂಲ್ಯ. ಅವರ ಹೆಸರು ನಿಲ್ದಾಣಕ್ಕೆ ಸಿಗುವುದರಿಂದ ಮುಂದಿನ ಪೀಳಿಗೆಗಳಿಗೆ ಇದು ಪ್ರೇರಣೆಯಾಗಲಿದೆ. ಸರ್ಕಾರ ಮತ್ತು ರೈಲ್ವೆ ಇಲಾಖೆ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಮನವಿ ಮಾಡಿದರು.

ಸಲ್ಲಿಸಲಾದ ಮನವಿಯಲ್ಲಿ, ಗದಗ ರೈಲ್ವೆ ನಿಲ್ದಾಣವನ್ನು “ಶ್ರೀ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ರೈಲ್ವೆ ನಿಲ್ದಾಣ” ಎಂದು ನಾಮಕರಣ ಮಾಡುವಂತೆ ರೈಲ್ವೆ ಇಲಾಖೆ ಮತ್ತು ರೈಲ್ವೆ ಸಚಿವಾಲಯಕ್ಕೆ ಜಿಲ್ಲಾ ಆಡಳಿತ ಶಿಫಾರಸು ಕಳುಹಿಸಬೇಕೆಂದು ಒಕ್ಕೂಟವು ಬೇಡಿಕೆ ಮಾಡಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ದೇಸಾಯಿ ದೊತರಬಂಡಿ, ಜಿಲ್ಲಾ ಉಪಾಧ್ಯಕ್ಷೆ ಸಾವಿತ್ರಮ್ಮ, ತಾ ಅಧ್ಯಕ್ಷೆ ಲಕ್ಷ್ಮೀ, ಪುರಸಭೆ ಮಾಜಿ ಸದಸ್ಯ ಎಸ್.ವೆಂಕೋಬ, ಪುರಸಭೆ ನಾಮ ನಿರ್ದೇಶಕ ಸದಸ್ಯ ವಿಜಯಕುಮಾರ್ ಗೌಡ, ಒಕ್ಕೂಟದ ಸದಸ್ಯರಾದ ಮಹದೇವಪ್ಪ ಹೂಗಾರ್, ಕೆ.ಸತ್ಯನಾರಾಯಣ, ವಿ.ಮೌನೇಶ, ಬಿ.ಸುರೇಶ, ಮಂಜುನಾಥ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *