ತುರ್ವಿಹಾಳ: ಸಿಂಧನೂರು ತಾಲೂಕಿನ ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಂದು ಬುಕನಟ್ಟಿ ಗ್ರಾಮದಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ ಮತ್ತು ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ಗ್ರಾಮದ ಸಾರ್ವಜನಿಕರಿಗೆ ರಕ್ತದೊತ್ತಡ ಮತ್ತು ಮಧುಮೇಹದಂತಹ ಅಸಾಂಕ್ರಾಮಿಕ ರೋಗಗಳ ಬಗ್ಗೆ ಉಚಿತ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಯಿತು.
ತಪಾಸಣೆಯ ಜೊತೆಗೆ ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಗ್ರಾಮಸ್ಥರಿಗೆ ವಿಶೇಷ ಮಾಹಿತಿ ನೀಡಲಾಯಿತು. ತಂಬಾಕು ಸೇವನೆಯು ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕಾಯಿಲೆಗಳಿಗೆ ಹೇಗೆ ದಾರಿ ಮಾಡಿಕೊಡುತ್ತದೆ ಹಾಗೂ ಮದ್ಯಪಾನದಿಂದ ಲಿವರ್ ವೈಫಲ್ಯ ಮತ್ತು ಹೃದಯ ಸಂಬಂಧಿ ತೊಂದರೆಗಳು ಹೇಗೆ ಉಂಟಾಗುತ್ತವೆ ಎಂಬುದರ ಬಗ್ಗೆ ತಾಲೂಕಿನ ಮೇಲ್ವಿಚಾರಕ ಎಫ್.ಎ.ಹಣಗಿ ವಿವರವಾಗಿ ತಿಳಿಸಿದರು. ಚಟಮುಕ್ತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಕರೆ ನೀಡಲಾಯಿತು. ಹಾಗೂ ಆಂಜನೇಯ ಹಿ.ಶುಷ್ರಶಕ ಅಧಿಕಾರಿ ಹಾಗೂ ಆರೋಗ್ಯ ಸಿಬ್ಬಂದಿಗಳಾದ ಯಲ್ಲಮ್ಮ,ಮಹಾಂತಪ್ಪ,ಗುರುನಾಥ,ಛತ್ರಪ್ಪ ರವರಿಂದ ಸ್ಥಳಿಯರಿಗೆ ಪರೀಕ್ಷಿಸಿ ಆರೋಗ್ಯ ಶಿಬಿರ ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಕ್ಷೇಮ ಕೇಂದ್ರದ ಸಿಬ್ಬಂದಿ ಯಲ್ಲಮ್ಮ,ಛತ್ರಪ್ಪ, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾ.ಕರ್ತೆಯರು ಹಾಜರಿದ್ದರು ಹಾಗೂ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರು ಪಾಲ್ಗೊಂಡು ಸೇವೆ ಪಡೆದರು.

Leave a Reply

Your email address will not be published. Required fields are marked *