(ಬಳಗಾನೂರು ಪೊಲೀಸರ ಭರ್ಜರಿ ಕಾರ್ಯಾಚರಣೆ 05 ಆರೋಪಿಗಳ ಬಂಧನ, 35 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ 50 ಮೋಟಾರ್ ಸೈಕಲ್‌ಗಳ ವಶ)
ಬೈಕ್ ಕಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಬಳಗಾನೂರು ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿ 35 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ 50 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
2026ರ ಜನವರಿ 30ರಂದು ಮಧ್ಯರಾತ್ರಿ ವೇಳೆ ಹನುಮನಗೌಡ ಕ್ಯಾತನಟ್ಟಿ ಅವರ ಮನೆಯ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ (ಕೆಎ-01 ಜೆಎ-6770) ಕಳ್ಳತನವಾಗಿತ್ತು. ಈ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 21/2026ರಡಿ ಪ್ರಕರಣ ದಾಖಲಾಗಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅರುಣಾಂಶು ಗಿರಿ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ. ಕುಮಾರಸ್ವಾಮಿ ಹಾಗೂ ಜಿ. ಹರೀಶ್, ಸಿಂಧನೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಜಿ. ಚಂದ್ರಶೇಖರ ಅವರ ನಿರ್ದೇಶನದಂತೆ ಸಿಂಧನೂರು ಗ್ರಾಮೀಣ ವೃತ್ತದ ಸಿಪಿಐ ವಿನಾಯಕ ಅವರ ನೇತೃತ್ವದಲ್ಲಿ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್‌ಐ ಎರಿಯಪ್ಪ ಅಂಗಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.
ತಂಡದ ನಿರಂತರ ಪರಿಶ್ರಮದ ಫಲವಾಗಿ ಚನ್ನಬಸವ ಹೂಗಾರ, ರಾಘವೇಂದ್ರ ಅಲಿಯಾಸ್ ಗಿಂಡಿ ರಾಘು, ಮಹೇಬೂಬ್ (ಮಸ್ಕಿ), ಮಹಮ್ಮದ್ ಲಾಲ್ (ಪರಾಪೂರು) ಹಾಗೂ ರಫೀಕ್ (ವಿರುಪಾಪೂರು, ಆಂಧ್ರ ಪ್ರದೇಶ) ಎಂಬ ಐವರು ಆರೋಪಿಗಳನ್ನು ಬಂಧಿಸಲಾಯಿತು.ವಿಚಾರಣೆ ವೇಳೆ ಆರೋಪಿಗಳಿಂದ ವಿವಿಧೆಡೆ ಕಳುವಾಗಿದ್ದ 50 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 35.20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಹಿ ನೀಡಿದ್ದಾರೆ.
ಬಳಗಾನೂರು ಪೊಲೀಸರ ಈ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದು, ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಕಳ್ಳರ ಜಾಲವನ್ನು ಭೇದಿಸಿ ಅಪಾರ ಪ್ರಮಾಣದ ವಾಹನಗಳನ್ನು ವಶಪಡಿಸಿಕೊಂಡಿರುವುದು ಬಳಗಾನೂರು ಪೊಲೀಸರ ದಕ್ಷತೆ ಮತ್ತು ತನಿಖಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.


