ಸಿಂಧನೂರು : ತಾಲೂಕಿನ ಹೊಸಳ್ಳಿ ಇ.ಜೆ. ಗ್ರಾಮದ ಮೊದಲನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಗೀತಾ ಹಿರೇಮಠ್ ಅವರು ಭಾಗವಹಿಸಿ ತಾಯಂದಿರು ಹಾಗೂ ಗರ್ಭಿಣಿಯರನ್ನು ಉದ್ದೇಶಿಸಿ ಆರೋಗ್ಯ ಜಾಗೃತಿ ಮೂಡಿಸಿದರು. ವಿಶೇಷವಾಗಿ ರಕ್ತಹೀನತೆ ಸಮಸ್ಯೆ ಹಾಗೂ ಬೇಸಿಗೆ ಕಾಲದಲ್ಲಿ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರವಾಗಿ ತಿಳಿಸಿದರು.
ಬೇಸಿಗೆ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗೆ ಸಾಕಷ್ಟು ನೀರು ಹಾಗೂ ದ್ರವ ಪದಾರ್ಥಗಳನ್ನು ನೀಡುವ ಮೂಲಕ ದೇಹವನ್ನು ಹೈಡ್ರೇಟ್ ಆಗಿಡಬೇಕು ಎಂದು ತಿಳಿಸಿದರು. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು, ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೇರ ಬಿಸಿಲಿನಿಂದ ದೂರವಿರಿಸುವುದು, ನಿಯಮಿತವಾಗಿ ಸ್ನಾನ ಮಾಡಿಸುವುದು ಹಾಗೂ ಚರ್ಮದ ರಕ್ಷಣೆಗೆ ಅಗತ್ಯವಿದ್ದಲ್ಲಿ ಸನ್‌ಸ್ಕ್ರೀನ್ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಸೋಂಕು ತಡೆಗಟ್ಟಲು ಕುದಿಸಿ ಆರಿಸಿದ ನೀರನ್ನು ಕುಡಿಸುವುದು ಅಗತ್ಯವೆಂದು ತಿಳಿಸಿದ ಅವರು, ಆರು ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳಿಗೆ ನೀರು, ಎಳೆನೀರು, ಹಣ್ಣಿನ ರಸ ಹಾಗೂ ಮಜ್ಜಿಗೆ ನೀಡುವಂತೆ ಸೂಚಿಸಿದರು. ಸ್ತನ್ಯಪಾನ ಮಾಡುವ ಶಿಶುಗಳಿಗೆ ಹೆಚ್ಚಾಗಿ ತಾಯಿಹಾಲುಣಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಹೊರಾಂಗಣ ಆಟಗಳನ್ನು ತಪ್ಪಿಸುವುದು, ಮಕ್ಕಳಿಗೆ ಟೋಪಿ ಹಾಗೂ ಛತ್ರಿ ಬಳಸುವುದು, ತಂಪಾದ ವಾತಾವರಣದಲ್ಲಿ ಇರಿಸುವುದು ಹಾಗೂ ಬೆವರು ದದ್ದುಗಳನ್ನು ತಡೆಗಟ್ಟಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು ಆರೋಗ್ಯಕರ ಕ್ರಮಗಳಾಗಿವೆ ಎಂದು ತಿಳಿಸಿದರು. ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ನಿರ್ಜಲೀಕರಣ, ಶಾಖಾಘಾತ ಹಾಗೂ ಚರ್ಮದ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಬಹುದು ಎಂದು ಹೇಳಿದರು.
ಇದೇ ವೇಳೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಮಕ್ಕಳಿಗೆ ನೀಡಲಾಗುವ ಲಸಿಕೆಗಳು ಸುಮಾರು 12 ಮಾರಕ ರೋಗಗಳಿಂದ ರಕ್ಷಣೆ ನೀಡುತ್ತವೆ. ಯಾವುದೇ ಮಗು ಲಸಿಕೆ ವಂಚಿತವಾಗದಂತೆ ಎಲ್ಲಾ ತಾಯಂದಿರು ಜಾಗೃತಿ ವಹಿಸಿ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಎಚ್‌ಸಿಇಒ ನಿಂಗಮ್ಮ, ಎಚ್ಐಒ ಮಲ್ಲಿಕಾರ್ಜುನ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತಾಯಂದಿರು ಹಾಗೂ ಗರ್ಭಿಣಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *