ದೆಹಲಿ : ರಾಜ್ಯಸಭಾ ಸದಸ್ಯೆ, ಖ್ಯಾತ ಲೇಖಕಿ ಹಾಗೂ ಸಮಾಜಸೇವಕಿಯಾಗಿರುವ ಸುಧಾ ಮೂರ್ತಿ ಅವರು ರಚಿಸಿರುವ, ಲೋಕಸಭಾ ಕಾರ್ಯಾಲಯದಿಂದ ಪ್ರಕಟಿತವಾದ “ಟೈಡ್ಸ್ ಆಫ್ ಟೈಮ್” ಕಾಫಿ ಟೇಬಲ್ ಪುಸ್ತಕದ ಬಿಡುಗಡೆ ಸಮಾರಂಭವು ನವದೆಹಲಿಯ ಸಂಸತ್ ಭವನದ ಸಂವಿಧಾನ ಸದನದಲ್ಲಿ ಅತ್ಯಂತ ಗೌರವಯುತ ವಾತಾವರಣದಲ್ಲಿ ನೆರವೇರಿತು.
ಭಾರತೀಯ ಸಂಸತ್ತಿನ ವೈಭವಯುತ ಇತಿಹಾಸ, ಸಂಸತ್ತಿನ ಕಾರ್ಯಪದ್ಧತಿ, ಜನತಾಂತ್ರಿಕ ಮೌಲ್ಯಗಳು ಹಾಗೂ ಕಾಲಾನುಗತವಾಗಿ ರೂಪುಗೊಂಡ ಸಂಸದೀಯ ಪರಂಪರೆಗಳನ್ನು ದೃಶ್ಯಮಯವಾಗಿ ದಾಖಲಿಸಿರುವ ಈ ಕೃತಿ, ಸಂಸತ್ತಿನ ಪಯಣವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮಹತ್ವದ ದಾಖಲೆ ಎಂದು ಪರಿಗಣಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ರಾಯಚೂರು ಹಾಗೂ ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ್ ನಾಯಕ ಅವರು ಭಾಗವಹಿಸಿ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದರು. ದೇಶದ ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿಯಾದ ಸಿ.ಪಿ. ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾ ಅವರು ಮಾತನಾಡಿ, ಸಂಸತ್ತಿನ ಇತಿಹಾಸವನ್ನು ಜನಸಾಮಾನ್ಯರಿಗೂ ಸುಲಭವಾಗಿ ಪರಿಚಯಿಸುವಲ್ಲಿ ಇಂತಹ ಕಾಫಿ ಟೇಬಲ್ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ರಾಜ್ಯಸಭೆಯ ಉಪಸಭಾಪತಿಯಾದ ಹರಿವಂಶ್ ನಾರಾಯಣ್ ಸಿಂಗ್ ಹಾಗೂ ಹಿರಿಯ ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಸೇರಿದಂತೆ ಎರಡೂ ಸದನಗಳ ಅನೇಕ ಸಂಸದರು, ಸಂಸತ್ ಅಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಭಾರತೀಯ ಪ್ರಜಾಪ್ರಭುತ್ವದ ಬಲಿಷ್ಠ ಪರಂಪರೆ ಮತ್ತು ಸಂಸತ್ತಿನ ಕಾರ್ಯಪಟುತೆಯನ್ನು ದಾಖಲಿಸುವ ಸಾಹಿತ್ಯಿಕ ಪ್ರಯತ್ನಗಳು ರಾಷ್ಟ್ರದ ಇತಿಹಾಸ ಸಂರಕ್ಷಣೆಗೆ ಅಗತ್ಯವೆಂದು ಅಭಿಪ್ರಾಯಪಟ್ಟರು. ಸಂಸತ್ತು ಕೇವಲ ಕಾನೂನು ರಚನೆ ಮಾಡುವ ವೇದಿಕೆಯಷ್ಟೇ ಅಲ್ಲದೆ, ದೇಶದ ಪ್ರಜಾಪ್ರಭುತ್ವದ ಆತ್ಮವನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು, ಅದರ ಪಯಣವನ್ನು ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
“ಟೈಡ್ಸ್ ಆಫ್ ಟೈಮ್” ಕೃತಿ ಸಂಸತ್ತಿನ ವೈಭವ, ಸಂವಿಧಾನದ ಮೌಲ್ಯಗಳು ಹಾಗೂ ಭಾರತದ ಜನತಾಂತ್ರಿಕ ಅಭಿವೃದ್ಧಿಯ ಪಯಣವನ್ನು ಚಿತ್ರಗಳು ಮತ್ತು ದಾಖಲಾತಿಗಳ ಮೂಲಕ ಸೊಗಸಾಗಿ ಪರಿಚಯಿಸುವ ವಿಶಿಷ್ಟ ಕೃತಿಯಾಗಿದ್ದು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಯ ಸಂಪನ್ಮೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.


