ರಾಯಚೂರು ಏಪ್ರಿಲ್ 02 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವೈದ್ಯರೆಂದು ಸುಳ್ಳು ಹೇಳಿ ಅಮಾಯಕ ಜನರಿಗೆ ಮೊಸ ಮಾಡಿ ಗೊತ್ತಿಲ್ಲದ ಔಷಧಿಗಳ ಮೂಲಕ ಚಿಕಿತ್ಸೆ ನೀಡುವುದನ್ನೆ ವೃತ್ತಿಯಾಗಿ ಮಾಡಿಕೊಂಡಿರುವ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಜಿಲ್ಲೆಯಾದ್ಯಂತ 31 ನಕಲಿ ವೈದ್ಯರ ವಿರುದ್ದ ದಾಳಿ ಮಾಡಿ 18 ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲು ಹಾಗೂ 13 ಕ್ಲಿನಿಕ್ ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸುರೇಂದ್ರಬಾಬು ಅವರು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅವರ ಸೂಚನೆ ಮೇರೆಗೆ ಮತ್ತು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಇವರ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿರುವ ನಕಲಿ ವೈದ್ಯರುಗಳ ವಿರುದ್ಧ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಅಯುಷ್ಯ ಇಲಾಖೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚನೆ ಮಾಡಿ ದಿನಾಂಕ: 01.04.2026ರಂದು ಏಕಾಕಾಲಕ್ಕೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡವು ಸಕ್ರಿಯವಾಗಿ ಭಾಗವಹಿಸಿ ಈ ವಿಶೇಷ ಕಾರ್ಯಚರಣೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಒಂದೇ ಸಮಯದಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರು ಹಾಗೂ ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೋಂದಣಿಯಾಗದ ಖಾಸಗಿ ಕ್ಲೀನಿಕ್‌ಗಳ ಮೇಲೆ ದಾಳಿ ನಡೆಸಲಾಯಿತು.
ಈ ದಾಳಿಯಲ್ಲಿ ವೈದ್ಯಕೀಯ ಅರ್ಹತೆ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದ ಹಲವಾರು ನಕಲಿ ವೈದ್ಯರುಗಳನ್ನು ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದಾಳಿ ವೇಳೆ ನಕಲಿ ವೈದ್ಯರು ಬಳಸುತ್ತಿದ್ದ ಔಷಧಿಗಳು, ಉಪಕರಣಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡು ಸಿಲ್ ಮಾಡಲಾಗಿದೆ. ಮುಂದುವರೆದು ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಕಾರ್ಯಚರಣೆ ಮುಂದುವರೆಯಲಿದ್ದು, ಜಿಲ್ಲೆಯಲ್ಲಿ ನಕಲಿ ವೈದ್ಯರು ಇಲ್ಲದಂತೆ ಕ್ರಮ ವಹಿಸಲಾಗುವುದು ಎಂದರು.
ದಾಳಿಯ ನಂತರ ದಾಖಲಾತಿಗಳ ಪರಿಶೀಲನೆ ಕೈಗೊಂಡು ನಕಲಿ ವೈದ್ಯರ ವಿರುದ್ಧ ಒಟ್ಟು 18 ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲು ಮತ್ತು 13 ಕ್ಲೀನಿಕ್ ಗಳನ್ನು ಸೀಜ್ ಮಾಡಿ ನೋಟಿಸ್ ನೀಡಲಾಗಿದೆ. ಸಾರ್ವಜನಿಕರು ಈ ದಿಶೆಯಲ್ಲಿ ತಮ್ಮ ಗ್ರಾಮದಲ್ಲಿ ವೈದ್ಯ ವೃತ್ತಿ ಮಾಡಲು ಯಾರಾದರೂ ಆಗಮಿಸಿದರೆ ದಯವಿಟ್ಟು ಅವರ ವಿದ್ಯಾರ್ಹತೆಯ ಮಾಹಿತಿ ಪಡೆಯಬೇಕು. ಒಂದು ವೇಳೆ ನಕಲಿ ವೈದ್ಯರಾದರೆ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಬೇಕು. ಕಟ್ಟಡಗಳನ್ನು, ಮಳಿಗೆ, ಮನೆಗಳನ್ನು ಬಾಡಿಗೆ ನೀಡುವ ಮಾಲಿಕರು ಸಹ ಎಚ್ಚರಿಕೆ ವಹಿಸಬೇಕೆಂದು ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



