ಸಿಂಧನೂರು: ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜು, ಸಿಂಧನೂರಿನಲ್ಲಿ ಶತಮಾನ ಕಂಡ ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ ಜನ್ಮದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಗಳವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅನ್ನದಾಸೋಹ ಏರ್ಪಡಿಸುವ ಮೂಲಕ ಅವರ ಆದರ್ಶಗಳನ್ನು ಸ್ಮರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಸ್ವಾಮೀಜಿಗಳವರ ತತ್ವಗಳು, ಸೇವಾಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸಿ ಎಲ್ಲರೂ ಮೌನ ಪ್ರಾರ್ಥನೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸೇರಿ ಭಕ್ತಿ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಗೌರವವನ್ನು ತಂದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಇರ್ಫಾನ್ ಕೆ ಅವರು ಮಾತನಾಡಿ, “ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಕೇವಲ ಧಾರ್ಮಿಕ ಗುರುಗಳಷ್ಟೇ ಅಲ್ಲ, ಅವರು ಮಾನವೀಯತೆಯ ಪ್ರತಿರೂಪವಾಗಿದ್ದರು. ಅವರ ಜೀವನವೇ ಒಂದು ಪಾಠಪುಸ್ತಕ. ಶಿಕ್ಷಣದ ಮಹತ್ವವನ್ನು ಅರಿತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಅನ್ನದಾಸೋಹ ನೀಡಿದ ಮಹಾನ್ ವ್ಯಕ್ತಿತ್ವ ಅವರದು. ಇಂದಿನ ಯುವಜನತೆ ಅವರ ಜೀವನದಿಂದ ಸ್ಪೂರ್ತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು ಹಾಗೂ ಸ್ವಾಮೀಜಿಗಳವರು ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಗುಣವನ್ನು ಬೆಳೆಸಿದರು. ಅವರ ಜೀವನ ನಮಗೆ ಸಹಿಷ್ಣುತೆ, ಶಿಸ್ತು ಮತ್ತು ಸೇವಾಭಾವನೆ ಕಲಿಸುತ್ತದೆ” ಎಂದು ಅಭಿಪ್ರಾಯಪಟ್ಟರು. ಹಾಗು ಕಾರ್ಯಕ್ರಮದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಚಾರ್ಯ ಚಕ್ರವರ್ತಿ ಮಾತನಾಡಿ ಶಿಕ್ಷಣವೆಂಬುದು ಕೇವಲ ಉದ್ಯೋಗಕ್ಕಾಗಿ ಅಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಸಾಧನ ಎಂಬುದನ್ನು ಸ್ವಾಮೀಜಿಗಳು ತಮ್ಮ ಜೀವನದ ಮೂಲಕ ತೋರಿಸಿದ್ದಾರೆ. ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗದೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.ಹಾಗೂ ಉಪನ್ಯಾಸಕ ಡಾ.ರಾಜೇಶ್ ಮಾತನಾಡಿ ಸ್ವಾಮೀಜಿಗಳವರ ಜೀವನ ಚರಿತ್ರೆಯನ್ನು ವಿವರವಾಗಿ ವಿವರಿಸಿ, “ಅವರ ಸರಳ ಜೀವನ, ಶಿಸ್ತಿನ ನಡೆ ಹಾಗೂ ವಿದ್ಯಾರ್ಥಿಗಳ ಮೇಲಿನ ಅಪಾರ ಕಾಳಜಿ ಎಲ್ಲರಿಗೂ ಮಾದರಿ.ವಿದ್ಯಾರ್ಥಿಗಳು ಅವರಂತೆಯೇ ಪರಿಶ್ರಮ, ನಿಷ್ಠೆ ಹಾಗೂ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು “ನಾನು ಸಿದ್ದಗಂಗಾ ಮಠದಲ್ಲಿ ಬಿಎಸ್ಸಿ ಪದವಿ ಪಡೆದು ಸ್ವಾಮೀಜಿಗಳನ್ನು ಸಮೀಪದಿಂದ ನೋಡುವ ಭಾಗ್ಯ ಪಡೆದಿದ್ದೇನೆ. ಅವರು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಆತ್ಮೀಯವಾಗಿ ವರ್ತಿಸುತ್ತಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದಾನ ಮಾಡಿದ ಮಹಾನ್ ವ್ಯಕ್ತಿ ಅವರು” ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಇತರ ಉಪನ್ಯಾಸಕರಾದ ಅಶು ಪಾಷಾ, ಚೈತ್ರ, ದಿಲೀಪ್, ಹರ್ಷಿತಾ, ಸಂತೋಷಿ, ವೀರೇಶ್ವರಿ, ಸುಧಾ, ವೀರೇಶ್, ನಾಗರತ್ನ, ಫರೀದಾ, ಪರ್ವೀನ್, ಪವಿತ್ರ, ವೀರಭದ್ರಯ್ಯ ಸ್ವಾಮಿ, ಮನೋಹರ ಮೈಲಾಪುರ್, ಪುಟ್ಟರಾಜು ಅವರು ಕೂಡ ಸ್ವಾಮೀಜಿಗಳವರ ಆದರ್ಶಗಳನ್ನು ಸ್ಮರಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, “ಸ್ವಾಮೀಜಿಗಳ ಜೀವನ ನಮಗೆ ಸತ್ಯನಿಷ್ಠೆ, ಪರಿಶ್ರಮ ಮತ್ತು ಸಮಾಜಸೇವೆ ಮಾಡುವ ಪ್ರೇರಣೆ ನೀಡುತ್ತದೆ. ನಾವು ಅವರ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

Leave a Reply

Your email address will not be published. Required fields are marked *