ಮಾನ್ವಿ : ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜನಗಣತಿ 2027ರ ಅಂಗವಾಗಿ ಮೇಲ್ವಿಚಾರಕರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಸ್ವಯಂ ಗಣತಿಗೆ ಚಾಲನೆ ನೀಡಿ ಮಾತನಾಡಿ, ಭಾರತ ಸರ್ಕಾರವು ದೇಶದ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಅಭಿವೃದ್ದಿಗಾಗಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಏಪ್ರಿಲ್ 1ರಿಂದ 15ರವರೆಗೆ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಸ್ವಯಂ ಗಣತಿಯನ್ನು ಸುಲಭವಾಗಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಂತರದ ಹಂತದಲ್ಲಿ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಕಾರ್ಯ ನಡೆಯಲಿದೆ. ಪಟ್ಟಣ ಪ್ರದೇಶದಲ್ಲಿ ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ 46 ಮೇಲ್ವಿಚಾರಕರು ಮತ್ತು 247 ಗಣತಿದಾರರ ಮೂಲಕ ಜನಗಣತಿ ಕಾರ್ಯ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜನಗಣತಿದಾರರಿಗೆ ಏಪ್ರಿಲ್ 3 ಮತ್ತು 4ರಂದು ಪಟ್ಟಣದಲ್ಲಿ ತರಬೇತಿ ನೀಡಲಾಗುವುದು. ಸಾರ್ವಜನಿಕರು ಜನಗಣತಿಯಲ್ಲಿ ಭಾಗವಹಿಸಿ ಗಣತಿದಾರರಿಗೆ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಸಹಕಾರ ನೀಡುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ತರಬೇತಿದಾರರಾದ ಶ್ರೀಕಾಂತ ಬಾಗೆವಾಡಿ, ಚನ್ನಬಸವರಾಜ ಮಾಡಗಿರಿ, ಬಸವರಾಜ, ಹರೀಷ್ ಅವರು ಮೇಲ್ವಿಚಾರಕರಿಗೆ ಅಗತ್ಯ ತರಬೇತಿಯನ್ನು ನೀಡಿದರು.

Leave a Reply

Your email address will not be published. Required fields are marked *