ಸಿಂಧನೂರು: ನಾಡಿನ ಸಾಂಪ್ರದಾಯಿಕ ಯುಗಾದಿ ಮತ್ತು ಪವಿತ್ರ ರಂಜಾನ್ ಮಾಸದ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವವನ್ನು ಸಾರಲು ಸಿಂಧನೂರಿನಲ್ಲಿ “ಹಬ್ಬಗಳ ಸೌಹಾರ್ದ ಸಂಗಮ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸದ್ಭಾವನಾ ವೇದಿಕೆ ಸಿಂಧನೂರು, ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ಹಾಗೂ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.ದಿನಾಂಕ: 03-04-2026, ಶುಕ್ರವಾರ ಸಂಜೆ 7:15 ಕ್ಕೆ ಮಿಲಾಪ್ ಶಾದಿ ಮಹಲ್, ಕೋಟೆ ಪ್ರದೇಶ, ಸಿಂಧನೂರು.ಜೀವನವೆಂಬುದು ಕಷ್ಟ-ಸುಖಗಳ (ಬೇವು-ಬೆಲ್ಲ) ಸಂಗಮವೆಂದು ಸಾರುವ ಯುಗಾದಿ ಹಬ್ಬ ಹಾಗೂ ಒಂದು ತಿಂಗಳ ಕಾಲ ಉಪವಾಸದ ಮೂಲಕ ತಾಳ್ಮೆ, ಪ್ರೀತಿ ಮತ್ತು ತ್ಯಾಗದ ಮೌಲ್ಯಗಳನ್ನು ಕಲಿಸುವ ರಂಜಾನ್ ಹಬ್ಬ – ಇವೆರಡೂ ಸಮನ್ವಯಗೊಂಡು ಸಮಾಜದಲ್ಲಿ ಶಾಂತಿ ಮತ್ತು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ಕಾರ್ಯಕ್ರಮದಲ್ಲಿ ಪ್ರಖ್ಯಾತ ಪ್ರವಚನಕಾರರಾದ ಶ್ರೀ ಮಹಾಂತಸ್ವಾಮಿಗಳು ಸಾಲಿಮಠ ಮುದಗಲ್ ಕಲ್ಯಾಣಾಶ್ರಮ ತಿಮ್ಮಾಪುರ ಹಾಗೂ ಪ್ರಖ್ಯಾತ ಪ್ರವಚನಕಾರರಾದ ಶ್ರೀ ಮುಹಮ್ಮದ್ ಕುಂಞ (ವ್ಯವಸ್ಥಾಪಕರು ಶಾಂತಿ ಪ್ರಕಾಶನ ಮಂಗಳೂರು) ಹಾಗೂ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಡಾ. ಮಧುಮತಿ ದೇಶಪಾಂಡೆ ಅವರು ವಿಚಾರ ಮಂಡನೆ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ, ಮಾಜಿ ಸಂಸದರಾದ ಶ್ರೀ ಕೆ. ವಿರೂಪಾಕ್ಷಪ್ಪ, ಮಾಜಿ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸನಗೌಡ ಬಾದರ್ಲಿ, ಕೆ ಕರಿಯಪ್ಪ ಬಿಜೆಪಿ ಮುಖಂಡರು ಸಿಂಧನೂರು ,ಹನುಮಗೌಡ ಬೆಳಗುರ್ಕಿ ರೈತ ಮುಖಂಡರು ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಹಾಗೂ ಕನ್ನಡದ ಕಟ್ಟಾಳುಗಳು ಉಪಸ್ಥಿತರಿರಲಿದ್ದಾರೆ.”ನಾವೆಲ್ಲರೂ ಒಂದೇ ಎಂಬ ಸದ್ಭಾವನೆಯೊಂದಿಗೆ ಈ ಸೌಹಾರ್ದ ಸಂಗಮದಲ್ಲಿ ಪಾಲ್ಗೊಳ್ಳೋಣ. ಕಾರ್ಯಕ್ರಮದಲ್ಲಿ ಬೇವು-ಬೆಲ್ಲ ಹಾಗೂ ಸುರುಕುರುಮ ಹಂಚುವ ಮೂಲಕ ಸಮರಸದ ಜೀವನಕ್ಕೆ ನಾಂದಿ ಹಾಡೋಣ” ಎಂದು ಆಯೋಜಕರಾದ ಡಾ|| ಚನ್ನನಗೌಡ ಪೊಲೀಸ್ ಪಾಟೀಲ, ಹುಸೇನ್ ಸಾಬ್ ಮತ್ತು ಪಂಪಯ್ಯಸ್ವಾಮಿ ಸಾಲಿಮಠ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *