ರಾಯಚೂರು ಮಾರ್ಚ್ 31 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ 2026-27ನೇ ಸಾಲಿನ ಕಂದಾಯ ಪಾವತಿಯನ್ನು ಏಪ್ರಿಲ್ 1ರಿಂದ 30ರೊಳಗಾಗಿ ತೆರಿಗೆ ಪಾವತಿ ಮಾಡಿದಲ್ಲಿ ತೆರಿಗೆ ಪಾವತಿಯ ಒಟ್ಟು ಮೊತ್ತಕ್ಕೆ ಶೇ. 5 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದ್ದು,
ನಿಗದಿತ ಅವಧಿಯೊಳಗೆ ಪಾವತಿ ಮಾಡಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
ಮೇ ಮತ್ತು ಜೂನ್ ಮಾಹೆಯಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡಲಾಗುವುದಿಲ್ಲ. ಮತ್ತು ಜುಲೈ 2026 ರಿಂದ ಒಟ್ಟು ಆಸ್ತಿ ತೆರಿಗೆಯ ಮೊತ್ತಕ್ಕೆ ಶೇಕಡ 2ರಷ್ಟು ಬಡ್ಡಿಯನ್ನು ವಿಧಿಸಲಾಗುವುದು. ನಿಗದಿತ ಅವಧಿಯಲ್ಲಿ ಪಾಲಿಕೆಗೆ ಪಾವತಿ ಮಾಡಬೇಕಾದ ಆಸ್ತಿಯ ಕಂದಾಯ ತೆರಿಗೆ, ನೀರಿನ ಶುಲ್ಕಗಳನ್ನು ಪಾವತಿ ಮಾಡುವುದರಿಂದ ನಗರದ ಸರ್ವತೋಮುಖ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಇದಕ್ಕಾಗಿ ಮಹಾನಗರ ಪಾಲಿಕೆಯ ವಲಯ ಕಚೇರಿ-1ರಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಲು ಎರಡು ಕೌಂಟರ್‌ಗಳು ಮತ್ತು ವಲಯ ಕಚೇರಿ-02 ರಲ್ಲಿ ಒಂದು ಕೌಂಟರ್‌ನ್ನು ತೆರೆಯಲಾಗಿದ್ದು, ಈ ಕೌಂಟರ್‌ಗಳಲ್ಲಿ ತೆರಿಗೆ ಪಾವತಿ ಮಾಡಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *