ಮಾನ್ವಿ,: ಪಟ್ಟಣದ ಕಳಿಂಗ ಪಿ.ಯು. ಕಾಲೇಜಿನಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ ವತಿಯಿಂದ ನಡೆದ ವಿವಿಧ ದತ್ತಿ ದಾನಿಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ದಿ.ಶ್ರೀ ರಾಮಚಂದ್ರಪ್ಪ ದತ್ತಿ ವಿಷಯ ರಾಮಚಂದ್ರಪ್ಪನವರ ಕುರಿತು ನಿವೃತ್ತ ಶಿಕ್ಷಕ ಮೂಕಪ್ಪ ಕಟ್ಟಿಮನಿ ಉಪನ್ಯಾಸ ನೀಡಿ ರಾಮಚಂದ್ರಪ್ಪನವರು ಮಾನ್ವಿ ಪಟ್ಟಣದಲ್ಲಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ಸಮೂಹವನ್ನು ತಮ್ಮೊಂದಿಗೆ ಮುನ್ನಡೆಸುವ ಮೂಲಕ ಇಂದಿಗೂ ಕೂಡ ಸ್ಮರಣಿಯರಾಗಿದ್ದಾರೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರನ್ನು ಪಟ್ಟಣಕ್ಕೆ ಕರೆಸಿ ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವುದರ ಜೊತೆಯಲ್ಲಿ ಪಟ್ಟಣದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ ಕನ್ನಡ ಪರ ಅನೇಕ ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಅನ್ನು ಮನೆ,ಮನೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದರು.
ಮಾಜಿ ಎ.ಪಿ.ಎಂ.ಸಿ. ಸದಸ್ಯರಾದ ಶಿವರಾಜ ನಾಯಕ ಮಾತನಾಡಿ ಕ.ಸಾ.ಪ ತಾಲೂಕು ಘಟಕವು ದತ್ತಿ ದಾನಿಗಳು ನೀಡಿದ ವಿವಿಧ ವಿಷಯಗಳ ಕುರಿತು ಶಾಲೆಗಳಲ್ಲಿ ಉಪನ್ಯಾಸಕರಿಂದ ಉಪನ್ಯಾಸವನ್ನು ನೀಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆಯ ಕುರಿತು ಜ್ಞಾನವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದರು.
ಆರ್. ಲಲಿತಮ್ಮನವರ ಹೆಸರಿನ ದತ್ತಿ ವಿಷಯ ಕನ್ನಡ ಸಾಹಿತ್ಯ ಕುರಿತು ನಿವೃತ್ತ ಮುಖ್ಯಗುರುಗಳಾದ ಮಹಿಮೂದಬೇಗಂ, ದಿ. ಮನೋರಂಜನ ಹೆಸರಿನಲ್ಲಿ ವಚನ ಸಾಹಿತ್ಯ ವಿಷಯದ ಕುರಿತು ಜಿ.ಎಂ. ರಂಗಪ್ಪ ಮೇದಾ ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ ಅಂಬಮ್ಮ ಪ್ರತಾಪಸಿಂಗ್ ರವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಕೃಷಿಗಾಗಿ ದಿ.ಕುಂಬಳೂರು ಆದಮ್ಮ ಈರಣ್ಣ ಸ್ಮಾರಕ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಂ.ಮಲ್ಲಿಕಾರ್ಜುನಗೌಡ ಪೋತ್ನಾಳ ರವರು ಹೊಸದಾಗಿ ಕಸಾಪಗೆ ಮರಿಲಿಂಗಣ್ಣಗೌಡ ಸ್ಮಾರಕ ದತ್ತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾ.ಕ.ಸಾ.ಪ. ಅಧ್ಯಕ್ಷರಾದ ಶರಣಬಸವ ನೀರಮಾನ್ವಿ , ಬಿವಿಆರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ.ರೆಡ್ಡಿ, ಕಸಾಪ ಕಳಿಂಗ ಕಾಲೇಜಿನ ಆಡಳಿತಾಧಿಕಾರಿ ದತ್ತಾತ್ರೇಯ ಮೇಟಿ, ಹೆಚ್.ಶರ್ಫುದ್ದೀನ್ ಪೋತ್ನಾಳ,ಚಂದ್ರಶೇಖರ ಸುಟ್ಟಹಟ್ಟಿ, ಉಪನ್ಯಾಸಕಿ ಲಾವಣ್ಯ, ಲಕ್ಷ್ಮಣ ಜಾನೇಕಲ್, ಹನುಮಂತ ಕೊಟ್ನೆಕಲ್, ಸೈಯ್ಯದ್ ಹುಸೇನ್ ಸಾಹೇಬ್, ಡಾ.ಚನ್ನಬಸವ ಮಾಡಗಿರಿ, ಡಾ.ಬಸವರಾಜ ಸುಂಕೇಶ್ವರ ಸೇರಿದಂತೆ ಇನ್ನಿತರು ಇದ್ದರು.

