ಸಿಂಧನೂರು: ತಾಲೂಕಿನ ನಂಜಲದಿನ್ನಿ ಗ್ರಾಮದಲ್ಲಿ ಇತ್ತೀಚೆಗೆ ಸೊಳ್ಳೆಗಳಿಂದ ಹರಡುವ ರೋಗಗಳು ಮತ್ತು ಅಸಾಂಕ್ರಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪೀಪಲ್ ಟು ಪೀಪಲ್ ಹೆಲ್ತ್ ಫೌಂಡೇಶನ್ ಮತ್ತು ಜೆಇ ಹೆಲ್ತ್ ಕೇರ್ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಕ್ಯಾನ್ಸರ್ ಎಂದರೇನು, ಅದರ ಆರಂಭಿಕ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಹೇಗೆ ಗುರುತಿಸಬೇಕು ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಿದರು. ವಿಶೇಷವಾಗಿ ಕೆಲವು ಮಾರಕ ಕ್ಯಾನ್ಸರ್ ಕಾಯಿಲೆಗಳಿಗೆ ಆರಂಭಿಕ ಹಂತದಲ್ಲಿಯೇ ಸುಲಭ ಹಾಗೂ ಸುರಕ್ಷಿತವಾಗಿ ಮಾಡಿಸಿಕೊಳ್ಳಬಹುದಾದ ‘ಸ್ಕ್ರೀನಿಂಗ್ ಟೆಸ್ಟ್’ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಇದೇ ಸಂದರ್ಭದಲ್ಲಿ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ,ಆನೆಕಾಲು ರೋಗ,ಮೆದಳು ಜ್ವರ ದಂತಹ ರೋಗಗಳ ನಿಯಂತ್ರಣದ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಮೂಡಿಸಿ, ಉಚಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಈ ಶಿಬಿರದಲ್ಲಿ ತಾಲೂಕಾ ವಿ.ಬಿ.ಡಿ ಮೇಲ್ವಿಚಾರಕರಾದ ಎಫ್.ಎ. ಹಣಗಿ, ನರ್ಸಿಂಗ್ ಅಧಿಕಾರಿಗಳಾದ ಆಂಜನೇಯ, ಪ್ರಯೋಗಾಲಯ ತಂತ್ರಜ್ಞರಾದ (LTO) ಗುರುಲಿಂಗ, ಸಮುದಾಯ ಅಧಿಕಾರಿ ಹನುಮಂತ, ಆರೋಗ್ಯ ಕಾರ್ಯಕರ್ತೆ (ANM) ತನುಜಾ ಹಾಗೂ ಆಶಾ ಕಾರ್ಯಕರ್ತೆಯರಾದ ರೇಣುಮ್ಮ, ಅಂಗನವಾಡಿ ಕಾರ್ಯರ್ತೆಯರಾದ ಲಕ್ಷ್ಮಿ,ರೇಷ್ಮಾ ಮತ್ತು ತಂಡದವರು ಉಪಸ್ಥಿತರಿದ್ದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.


