ಮಾನ್ವಿ: ಜಮಾತೆ ಇಸ್ಲಾಮಿ ಹಿಂದ್ ಮಾನ್ವಿ ವತಿಯಿಂದ ಮಾನ್ವಿ ನಗರದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಕೂಟ ಕಾರ್ಯಕ್ರಮವು ಧರ್ಮೀಯ ಸಾಮರಸ್ಯ ಮತ್ತು ಸಾಮಾಜಿಕ ಏಕತೆಯ ಸಂದೇಶ ಸಾರುವ ವೇದಿಕೆಯಾಗಿ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಹಂಪಯ್ಯ ನಾಯಕ್ ಸಾಹುಕಾರ್ ಮಾತನಾಡಿ, ಸೌಹಾರ್ದ ಕೂಟಗಳು ಸಮಾಜದಲ್ಲಿ ಸಹಬಾಳ್ವೆ, ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಮಹತ್ವದ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.
ಇಂತಹ ಸಮಾರಂಭಗಳು ಜಾತಿ, ಮತ, ಭಾಷೆ, ಸಂಸ್ಕೃತಿ ಭೇದಗಳನ್ನು ಮೀರಿ ಜನರನ್ನು ಒಂದೇ ಕುಟುಂಬದಂತೆ ಸಂಪರ್ಕಿಸುವ ಕಾರ್ಯ ಮಾಡುತ್ತವೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಪರಸ್ಪರ ವಿಶ್ವಾಸ ಮತ್ತು ಸಹಕಾರ ಅತ್ಯಂತ ಅಗತ್ಯ ಎಂದು ಅವರು ತಿಳಿಸಿದರು.
ರಂಜಾನ್ ಹಬ್ಬವು ತ್ಯಾಗ, ಸಹನೆ, ಸೇವಾಭಾವ ಮತ್ತು ಮಾನವೀಯತೆಯ ಮಹತ್ವವನ್ನು ಸಾರುತ್ತದೆ. ಉಪವಾಸದ ಮೂಲಕ ಆತ್ಮಶುದ್ಧಿ ಸಾಧಿಸುವ ಈ ಪವಿತ್ರ ಕಾಲದಲ್ಲಿ ಮಾನವ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಧಾರ್ಮಿಕ ವೈವಿಧ್ಯತೆಯೇ ಭಾರತದ ಶಕ್ತಿ. ನಾವು ನಮ್ಮ ಧರ್ಮವನ್ನು ಗೌರವಿಸುವಂತೆ ಇತರರ ಧರ್ಮ ಮತ್ತು ಸಂಸ್ಕೃತಿಯನ್ನೂ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಹಾಗೂ ಸಮರಸತೆ ಸಾಧ್ಯವಾಗುತ್ತದೆ. ಇಂತಹ ಸೌಹಾರ್ದ ಕೂಟಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಜೊತೆಗೆ ಯುವಜನತೆಗೆ ಸರಿಯಾದ ದಿಕ್ಕು ತೋರಿಸುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಮಠ ಮಾನ್ವಿಯ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಮಹಾಸ್ವಾಮಿಗಳು, ಸೈಂಟ್ ಮೇರಿ ಚರ್ಚ್ ಧರ್ಮ ಕೇಂದ್ರದ ಫಾದರ್ ವೆನಸೆಂಟ್ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್ ಸಾಬ್, ಮಾಜಿ ಶಾಸಕ ಬ್ಯಾಗವಾಟ್ ಬಸನಗೌಡ, ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ಕೆ. ಅಂಬರೇಶಪ್ಪ, ಪ್ರವಚನಕಾರ ಜನಾಬ್ ಲಾಲ್ ಹುಸೇನ್ ಕಂದಗಲ್, ಸೈಯ್ಯದ್ ಅಕ್ಬರ್ ಪಾಷಾ ಹುಸೇನಿ, ಸೈಯದ್ ಖಾಲಿದ ಖಾದ್ರಿ, ಮೌಲಾನ ಅನ್ವರ್ ಪಾಷ ಉಮರಿ, ಅಬ್ದುಲ್ ಕರೀಂ ಖಾನ್ ಸಾಬ್, ಶೇಕ್ ಫರೀದ್ ಉಮ್ರಿ, ಶೇಕ್ ಬಾಬಾ ಹುಸೇನ್, ಮಾಜಿ ಅಧ್ಯಕ್ಷ ಅಬ್ದುಲ್ ರಹಮಾನ್ ಸೇರಿದಂತೆ ಹಲವಾರು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿವಿಧ ಧರ್ಮಗಳ ಪ್ರತಿನಿಧಿಗಳ ಸಾನ್ನಿಧ್ಯದಲ್ಲಿ ನಡೆದಿದ್ದು, ಸಾಮರಸ್ಯ ಮತ್ತು ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ಸಾರಿತು.

Leave a Reply

Your email address will not be published. Required fields are marked *