ಮಾನ್ವಿ : ಭಾವೈಕ್ಯತೆ ಶಾಲಾ ಮಟ್ಟದಲ್ಲೇ ಪ್ರಾರಂಭವಾಗಬೇಕು, ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಾಲೆಗಳ ಮೇಲಿದೆ ಎಂದು ಸೆಂಟ್ ಮೇರಿಸ್ ಚರ್ಚ್‌ನ ಫಾಧರ್ ಸುರೇಶ್ ವಿನ್ಸೆಂಟ್ ಹೇಳಿದರು.

ಅವರು ಪಟ್ಟಣದ ರಿಜ್ ಎಜುಕೇಶನ್ ಇಂಟರ್ನ್ಯಾಷನಲ್ ಶಾಲೆಯ ಆವರಣದಲ್ಲಿ ನಡೆದ ಶಿಕ್ಷಣ ಸಂಸ್ಥೆಯ 7ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಕೇವಲ ಪಾಠ್ಯಪುಸ್ತಕಗಳ ಜ್ಞಾನಕ್ಕಷ್ಟೇ ಸೀಮಿತವಾಗದೆ, ಉತ್ತಮ ನಾಗರಿಕರಾಗಿ ಬೆಳೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು. ಇಂತಹ ವಾರ್ಷಿಕೋತ್ಸವಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವಕೀಲರಾದ ಸಿದ್ದಲಿಂಗಪ್ಪ ವಕೀಲರು ನೆರವೇರಿಸಿ, ಶಿಕ್ಷಣ ಸಂಸ್ಥೆಗಳು ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಉತ್ತಮ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖವಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ನಾಮನಿರ್ದೇಶನ ಸದಸ್ಯ ವಿಜಯಕುಮಾರ ಗೌಡ, ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜನೇಯ್ಯ ನಸ್ಲಾಪೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಶಿವಕುಮಾರ್ ಚಲ್ಮಲ್‌, ವೆಂಕಟೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಶಂಕ್ರಪ್ಪ ನಕ್ಕುಂದಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹುಸೇನ್ ಬಾಷಾ ನಕ್ಕುಂದಿ, ಕಾರ್ಯದರ್ಶಿ ನದಾಫ್ ಖಾಜಾಬೀ ಸೇರಿದಂತೆ ಶಿಕ್ಷಕ ವೃಂದ, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *