ಸಿಂಧನೂರು:ಮಾ.31: ಸಿಂಧನೂರನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ, ದಿನಾಂಕ 31-03-2026 ಮಂಗಳವಾರ ರಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ (ರಿ) ವತಿಯಿಂದ ನಗರದ ತಹಸಿಲ್ ಕಾರ್ಯಾಲಯದ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಸಿಂಧನೂರು ನಗರವು ಆಡಳಿತಾತ್ಮಕ ಹಾಗೂ ಭೌಗೋಳಿಕ ದೃಷ್ಟಿಯಿಂದ ಜಿಲ್ಲೆಯಾಗಲು ಸೂಕ್ತ ಹಾಗೂ ಯೋಗ್ಯವಾಗಿದೆ. ಭತ್ತದ ಕಣಜವೆಂದು ಖ್ಯಾತಿ ಪಡೆದಿರುವ ಈ ಭಾಗವು, ಏಷ್ಯಾದಲ್ಲೇ ಅತಿ ಹೆಚ್ಚು ಟ್ರ್ಯಾಕ್ಟರ್ ಮಾರಾಟವಾಗುವ ಪ್ರದೇಶವಾಗಿದ್ದು, ವಿವಿಧ ಜನಾಂಗಗಳ ಸಂಸ್ಕೃತಿಗಳನ್ನು ಒಳಗೊಂಡಿರುವುದರಿಂದ ‘ಮಿನಿ ಇಂಡಿಯಾ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದರೆ, ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.
ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳು ಕಡಿಮೆ ಅಂತರದಲ್ಲಿದ್ದರೂ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾ ಕೇಂದ್ರಗಳ ನಡುವೆ 150 ರಿಂದ 200 ಕಿ.ಮೀ ಅಂತರವಿದೆ. 1996ರಲ್ಲಿ ರಚನೆಯಾದ ಗದ್ದಿಗೌಡರ್ ಸಮಿತಿಯ ಮಾನದಂಡಗಳ ಪ್ರಕಾರ ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆ ಮತ್ತು ಜನರಿಗೆ ತಲುಪುವ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆ ರಚನೆ ಅಗತ್ಯವಾಗಿದೆ. ಪ್ರಸ್ತುತ ರಾಯಚೂರಿನಿಂದ ದೂರದ ಪ್ರದೇಶಗಳಿಗೆ ತೆರಳಲು ಹೆಚ್ಚಿನ ಸಮಯ ವ್ಯಯವಾಗುತ್ತಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಸಿಂಧನೂರು ಜಿಲ್ಲೆಯಾದರೆ ಈ ಸಮಸ್ಯೆ ಪರಿಹಾರವಾಗಲಿದೆ.
ಇದೇ ವೇಳೆ, ಸಿಂಧನೂರಿನಲ್ಲಿ 42ಕ್ಕೂ ಹೆಚ್ಚು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ವೇಗವಾಗಿ ಬೆಳೆಯುತ್ತಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಸರ್ಕಾರದಿಂದ ಸಮರ್ಪಕ ಗಮನ ಹರಿಸಲಾಗುತ್ತಿಲ್ಲ.
ಸಿಂಧನೂರನ್ನು ಜಿಲ್ಲೆಯನ್ನಾಗಿ ಘೋಷಿಸಿದಲ್ಲಿ ಜಿಲ್ಲಾಸ್ಪತ್ರೆ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಕಚೇರಿಗಳು ಸ್ಥಾಪನೆಯಾಗಲಿದ್ದು, ಸುತ್ತಮುತ್ತಲಿನ ತಾಲೂಕು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ. ತುರ್ತು ಸಂದರ್ಭಗಳಲ್ಲಿ ಜನರು ದೂರದ ಬಳ್ಳಾರಿ ಮತ್ತು ರಾಯಚೂರಿನ ಆಸ್ಪತ್ರೆಗಳತ್ತ ತೆರಳಬೇಕಾದ ಪರಿಸ್ಥಿತಿಯೂ ತಪ್ಪಲಿದೆ.
ಆದುದರಿಂದ, ರಾಜ್ಯ ಸರ್ಕಾರವು ಸಂಬಂಧಿತ ಇಲಾಖೆಗಳ ವರದಿ ಪಡೆದು ಶೀಘ್ರದಲ್ಲೇ ಸಚಿವ ಸಂಪುಟ ಸಭೆ ನಡೆಸಿ, ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ ಅಗತ್ಯ ಆದೇಶ ಹೊರಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಇದೇ ಹಿನ್ನೆಲೆಯಲ್ಲಿ, 31-03-2026 ರಂದು ನಡೆಯಲಿರುವ ಸಾಂಕೇತಿಕ ಧರಣಿ ಸತ್ಯಾಗ್ರಹಕ್ಕೆ ಸಾರ್ವಜನಿಕರು, ಹೋರಾಟಗಾರರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಉಮೇಶ್ ಗೌಡ ಕಾರ್ಯಧ್ಯಕ್ಷರು ಕರ್ನಾಟಕ, ಸಿಂಧನೂರು ನಗರ ಘಟಕದ ಅಧ್ಯಕ್ಷ ದೌಲಸಾಬ ದೊಡ್ಡಮನಿ, ಉತ್ತರ ಕರ್ನಾಟಕ ಉಪಾಧ್ಯಕ್ಷ ಖಾಜಾ ಬನ್ನಿಗನೂರು ,ಪರಶುರಾಮ,ರಾಘವೇಂದ್ರ,ಶ್ರೀಕಾಂತ ರಡ್ಡಿ,ಮಹಿಬೂಬಮುಳ್ಳುರು,ಮಲ್ಲಿಕಾರ್ಜುನ,ಕುನ್ನಟಗಿ,ರಾಘವೇಂದ್ರ ಕಂಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

