ರಾಯಚೂರು ಮಾರ್ಚ್ 27 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೆಲ್ ಕೊರತೆಯಿಲ್ಲ ಮತ್ತು ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸರಬರಾಜು ಲಭ್ಯsವಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಪೆಟ್ರೋಲ್ ಪಂಪ್‌ಗಳಲ್ಲಿ ಅಸಾಮಾನ್ಯ ಜನದಟ್ಟಣೆ ಕಂಡುಬಂದಿದ್ದು, ನಾಗರಿಕರು ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಯಲ್ಲಿ ಆತಂಕಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಅವರ ಮಾಹಿತಿಯ ಆಧಾರದ ಮೇಲೆ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಯಾವುದೇ ಕೊರತೆಯಿಲ್ಲ ಮತ್ತು ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸರಬರಾಜು ಲಭ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾಗರಿಕರು ಭಯಭೀತಿಯಿಂದ ಖರೀದಿಯಲ್ಲಿ ತೊಡಗಬೇಡಿ ಎಂದು ವಿನಂತಿಸಲಾಗಿದೆ. ಏಕೆಂದರೆ ಅಂತಹ ಕ್ರಮಗಳು ಅನಗತ್ಯ ಅನಾನುಕೂಲತೆ ಉಂಟುಮಾಡಬಹುದು ಮತ್ತು ಸಾಮಾನ್ಯ ಪೂರೈಕೆ ಕಾರ್ಯ ವಿಧಾನಗಳನ್ನು ಅಡ್ಡಿಪಡಿಸಬಹುದು. ಮುಂದುವರೆದು ಪೆಟ್ರೋಲಿಯಂ ಕಾಯ್ದೆ 1934 ಮತ್ತು ಪೆಟ್ರೋಲಿಯಂ ನಿಯಮಗಳು, 2002 ಕ್ಲಾಜ್(5) ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಪೆಟ್ರೋಲ್ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದರಿಂದ ಗಂಭೀರ ಸುರಕ್ಷತಾ ಅಪಘಾತಗಳನ್ನುಂಟು ಮಾಡುತ್ತದೆ. ರಾಯಚೂರು ಜಿಲ್ಲೆಯ ಎಲ್ಲಾ ಪೆಟ್ರೋಲ್ ಪಂಪ್ ಮಾಲೀಕರಿಗೆ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ, ಕ್ಯಾನ್, ಬ್ಯಾರಲ್‌ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಪೆಟ್ರೋಲ್ ಪಂಪ್‌ಗಳಲ್ಲಿ ಶಿಸ್ತು ಮತ್ತು ಸೌಹಾರ್ದಯುತ ನಡವಳಿಕೆಯನ್ನು ಕಾಪಾಡಿಕೊಳ್ಳಲು ಮತ್ತು ಪಂಪ್ ಸಿಬ್ಬಂದಿ ಹಾಗೂ ಸಹ ನಾಗರಿಕರೊಂದಿಗೆ ಮತ್ತು ಅಗತ್ಯ ಸೇವೆಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ಎಲ್ಲಾ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

