ಮಸ್ಕಿ: ಪಟ್ಟಣದಲ್ಲಿರುವ ಜೆಎಂಎಫ್‌ಸಿ ಸಂಚಾರಿ ನ್ಯಾಯಲಯದಲ್ಲಿ ವಾರದಲ್ಲಿ ೨ ದಿನ ಮಾತ್ರ ಕಾರ್ಯ ಕಲಾಪಗಳು ನಡೆಯುತ್ತಿರುವುದರಿಂದ ಕಕ್ಷಿದಾರರಿಗೆ ಸಮಸ್ಯೆಯಾಗುತ್ತಿರುವದರಿಂದ ಶಾಶ್ವತ ನ್ಯಾಯಲಯ ಮಂಜೂರಿಗೆ ವಕೀಲರ ಸಂಘದಿಂದ ಸರಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ವಕೀಲರ ಸಂಘದ ಅಧ್ಯಕ್ಷ ಹೆಚ್. ವೀರಭದ್ರಪ್ಪ ಮಾತನಾಡಿ ಸಂಚಾರಿ ನ್ಯಾಯಲಯವಾಗಿ ಗುರುವಾರ ಮತ್ತು ಶುಕ್ರವಾರ ಮಾತ್ರ ಕಾರ್ಯನಿರ್ವಾಹಿಸುತ್ತಿದೆ. ಪ್ರತಿ ವಾರ ಎರಡೂ ದಿನವೂ ದಿನವೊಂದಕ್ಕೆ ೨೮೦ ರಿಂದ ೩೦೦ ಪ್ರಕರಣಗಳು ವಿಚಾರಣೆ ನಡೆಯುತ್ತಿರುವುದರಿಂದ ಪ್ರಕರಣಗಳು ಶೀಘ್ರ ವಿಲೇವಾರಿಯಾಗದೇ ಸುಮಾರು ಈಗಾಗಲೇ ೨೮೦೦ ಪ್ರಕರಣಗಳು ಬಾಕಿ ಉಳಿದುಕೊಂಡಿದ್ದರಿಂದ ಸ್ಥಳೀಯ ಶಾಸಕರು ಶಾಶ್ವತ ನ್ಯಾಯಲಯ ಮಂಜೂರು ಮಾಡಿಸಲು ವಿಶೇಷ ಮುತುವರ್ಜಿವಹಿಸಬೇಕೆಂದರು.
ಮಸ್ಕಿಗೆ ಶಾಶ್ವತ ನ್ಯಾಯಲಯದ ಪೈಲ್ ಈಗಾಗಲೇ ಹಣಕಾಸು ಇಲಾಖೆಯಲ್ಲಿದ್ದು, ಈ ಬಗ್ಗೆ ಶಾಸಕರು ವಕೀಲರ ಸಂಘದ ನಿಯೋಗವನ್ನು ಮತ್ತೊಮ್ಮೆ ಕರೆದುಕೊಂಡು ಹೋಗಿ ಕಾನೂನು ಮಂತ್ರಿಗಳ ಮತ್ತು ಸರ್ಕಾರ ಮೇಲೆ ಒತ್ತಡ ಹೇರಬೇಕೆಂದು ಈ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಅಮರೇಗೌಡ, ರಾಮಣ್ಣ ಬಳಗಾನೂರು, ಮಲ್ಲಪ್ಪ ನಾಗರಬೆಂಚಿ, ರಾಮಣ್ಣ ನಾಯಕ ದೀನಸಮುದ್ರ, ಪಂಪನಗೌಡ ಗುಡದೂರು, ಬಸವರಾಜ ಯತ್ನಟ್ಟಿ, ನಭೀರಸೂಲ್ ಶೇಡ್ಮಿ, ಚನ್ನಪ್ಪ ನಾಗಲದಿನ್ನಿ ಇದ್ದರು.
ಮಸ್ಕಿ ಪಟ್ಟಣಕ್ಕೆ ಉಪ ನೋದಣಿ ಕಛೇರಿಯೂ ಅವಶ್ಯಕತೆಯಿದ್ದು, ಕೂಡಲೇ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಪಟ್ಟಣಕ್ಕೆ ಉಪ ನೋಂದಣಿ ಕಛೇರಿಯನ್ನು ಮಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.

