ರಾಯಚೂರು (ಮಾ.25): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ (ರಾಯಚೂರು – ಲಿಂಗಸುಗೂರು ಮುಖ್ಯ ರಸ್ತೆಯ ಬಲಭಾಗದಲ್ಲಿ) ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವ ಕಾನ್ಯಾಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದಾಗಿ ಕೆಸರು ಗದ್ದೆಯಂತಾಗುತ್ತಿದ್ದು, ಆ ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು, ದಿನನಿತ್ಯದ ವ್ಯವಹಾರಕ್ಕಾಗಿ ಪಾಮನಕಲ್ಲೂರು ಗ್ರಾಮಕ್ಕೆ ಸಂಚರಿಸುವ ಜನರು ಹೈರಾಣಾಗಿದ್ದಾರೆ.
ಕಾನ್ಯಾಳ ಭಾಗದಿಂದ ದಿನನಿತ್ಯ 20ಕ್ಕೂ ಹೆಚ್ಚು ಮಕ್ಕಳು ಪಾಮನಕಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾಭ್ಯಾಸ ಮಾಡಲು ತೆರಳುತ್ತಾರೆ. ಅಷ್ಟೇ ಅಲ್ಲದೇ ಅನೇಕ ಜನ ವಿದ್ಯಾರ್ಥಿಗಳು ಪ್ರೌಢ ಶಾಲೆ, ಕಾಲೇಜುಗಳಿಗೆ ತೆರಳುತ್ತಾರೆ. ದಿನನಿತ್ಯ ನೂರಾರು ಜನರು ದಿನನಿತ್ಯದ ವ್ಯವಹಾರಕ್ಕಾಗಿ ಪಾಮನಕಲ್ಲೂರು ಗ್ರಾಮಕ್ಕೆ ಸಂಚರಿಸುತ್ತಾರೆ.
ನಡೆದುಕೊಂಡು ಬರುವವರು, ದ್ವಿಚಕ್ರ ವಾಹನ ಸವಾರಿ ಮಾಡುವವರು ಸೇರಿದಂತೆ ಪ್ರತಿಯೊಬ್ಬರೂ ಇದೇ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಆದರೆ ಮಳೆ ಬಂದಾಗಲೆಲ್ಲಾ ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ನಡೆದುಕೊಂಡು ಹೋಗುವವರು ತಮ್ಮ ಚಪ್ಪಲಿಗಳನ್ನು ಕೈಯಲ್ಲಿಡಿದು ಬರಿಗಾಲಲ್ಲಿ ಸಾಗಬೇಕಾದ ಪರಿಸ್ಥಿತಿ ಮಳೆಗಾಲದಲ್ಲಿ ಎದುರಾಗುತ್ತದೆ.
ನಮ್ಮ ರಸ್ತೆಯನ್ನು ಸರಿಪಡಿಸಿಕೊಡಿ, ನಮಗೆ ಶಾಶ್ವತ ಪರಿಹಾರ ನೀಡಿ, ಸಿಸಿ ರಸ್ತೆ ನಿರ್ಮಿಸಿಕೊಡಿ ಎಂದು ನಾವು ಈಗಾಗಲೇ ಸಾಕಷ್ಟು ಬಾರಿ ನಮ್ಮ ಭಾಗದ ಸಂಸದರಿಗೂ, ಶಾಸಕರಿಗೂ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಆದರೇ ಅವರು ಕಳೆದ ಕೆಲ ವರ್ಷಗಳ ಹಿಂದೆ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿದ್ದರು. ಆ ಬಳಿಕ ರಸ್ತೆ ಮತ್ತಷ್ಟು ಹದಗೆಟ್ಟಿದೆ ಎಂದು ಕಾನ್ಯಾಳ ಭಾಗದ ಜನರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ಮಲ್ಲಯ್ಯ:
ಆ ಭಾಗದ ಜನರ ಒತ್ತಾಯದ ಮೇರೆಗೆ ಕಾನ್ಯಾಳ ಭಾಗಕ್ಕೆ ಬುಧವಾರ ಮಧ್ಯಾಹ್ನದ ವೇಳೆಗೆ ಭೇಟಿ ನೀಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಯ್ಯರವರು, ಕೆಸರು ಗದ್ದೆಯಂತಾದ ರಸ್ತೆಯಲ್ಲೇ ಸಂಚರಿಸಿ, ಪರಿಶೀಲನೆ ನಡೆಸಿದರು.
ನಿತ್ಯ ನರಕ ಅನುಭವಿಸುತ್ತಿರುವ ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನ್ಯಾಳ ಭಾಗದ ಜನರ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಿಕೊಡಲಿ. ಆ ಭಾಗದ ಜನರ ನೋವಿಗೆ ಸಂಬಂಧಿಸಿದವರು ಸ್ಪಂದಿಸಲಿ ಎಂಬುದು ಈ ವರದಿಯ ಆಶಯವಾಗಿದೆ.

ಮಳೆ ಬಂದರೆ ಸಾಕು ನಾವು ಚಪ್ಪಲಿ ಕೈಯಲಿಡಿದು ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಪ್ಪಲಿ ಕಾಲಲ್ಲಿದ್ದರೆ ಕಿತ್ತು ಹೋಗುತ್ತವೆ. ಅಷ್ಟೇ ಅಲ್ಲದೇ ಹಾಕಿಕೊಂಡ ಬಟ್ಟೆಗಳ ಬಣ್ಣ ಬದಲಾಗುತ್ತದೆ. ನಮ್ಮ ಭಾಗದಿಂದ ಮಕ್ಕಳು, ಹಿರಿಯರು ಪಾಮನಕಲ್ಲೂರು ಗ್ರಾಮಕ್ಕೆ ದಿನನಿತ್ಯ ಓಡಾಟ ಮಾಡುತ್ತಿರುತ್ತೆವೆ. ಸಿಸಿ ರಸ್ತೆ ನಿರ್ಮಿಸಿಕೊಡುವವರೆಗೂ ನಮ್ಮ ಭಾಗದ ರಸ್ತೆ ಸಮಸ್ಯೆ ಪರಿಹಾರವಾಗದು. ನಮ್ಮ ಪರಿಸ್ಥಿತಿಯನ್ನು ಸಂಬಂಧಿಸಿದವರು ಅರ್ಥ ಮಾಡಿಕೊಳ್ಳಬೇಕು.
ಅಯ್ಯಣ್ಣ ನಾಯಕ ಪಾಮನಕಲ್ಲೂರು,
ಕಾನ್ಯಾಳ ಭಾಗದ ನಾಗರಿಕ

ಕಾನ್ಯಾಳ ಭಾಗಕ್ಕೆ ಸಿಸಿ ರಸ್ತೆ ನಿರ್ಮಿಸಿಕೊಡುವಂತೆ ನಾವು ಈಗಾಗಲೇ ಸಾಕಷ್ಟು ಭಾರಿ ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವೆ. ಅಲ್ಲದೇ ಶಾಸಕರು, ಸಂಸದರಿಗೂ ನಮ್ಮ ಭಾಗದ ಯುವಕರು ಮನವಿ ಪತ್ರ ಸಲ್ಲಿಸಿದ್ದಾರೆ. ಆದರೇ ಇದುವರೆಗೂ ನಮ್ಮ ಮನವಿಗೆ ಫಲ ಸಿಕ್ಕಿಲ್ಲ.
ಅಂಬಮ್ಮ ನಾಯಕ ಯದಲದೊಡ್ಡಿ,
ಗ್ರಾಮ ಪಂಚಾಯತಿ ಸದಸ್ಯರು, ಪಾಮನಕಲ್ಲೂರು

ನಾನು ಗ್ರಾಮ ಪಂಚಾಯತಿ ಸದಸ್ಯನಾದಾಗಿನಿಂದ ಇಲ್ಲಿಯವರೆಗೂ ಅನೇಕ ಬಾರಿ ಕಾನ್ಯಾಳ ರಸ್ತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ. ಆ ಭಾಗದ ಜನರೊಂದಿಗೆ ಸೇರಿ ಅನೇಕ ಬಾರಿ ತಾ.ಪಂ, ಜಿ.ಪಂ, ಗ್ರಾ.ಪಂ ಗಳಿಗೂ ಮನವಿ ಸಲ್ಲಿಸಿದ್ದೆವೆ. ಆದರೂ ಆ ಭಾಗದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿರುವುದು ವಿಪರ್ಯಾಸವೇ ಸರಿ.
ಶ್ರೀನಿವಾಸ ಸಾನಬಾಳ,
ಗ್ರಾಮ ಪಂಚಾಯತಿ ಸದಸ್ಯರು, ಪಾಮನಕಲ್ಲೂರು

(ವಿದ್ಯಾರ್ಥಿಗಳು ಇರುವ ಪೋಟೋಗಳು ಈ ಹಿಂದೆ ಮಳೆ ಬಂದಾಗ ತೆಗೆದ ಪೋಟೋಗಳಾಗಿರುತ್ತವೆ)

Leave a Reply

Your email address will not be published. Required fields are marked *