ಮುದ್ದೇಬಿಹಾಳ:
ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ (ಜೆಜಿಎಂ) ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಮಂಗಳವಾರ ರಾಜ್ಯ ಗುಣಮಟ್ಟ ಮೇಲ್ವಿಚಾರಣಾಧಿಕಾರಿ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ವಿವಿಧ ಮನೆಗಳಿಗೆ ಭೇಟಿ ನೀಡಿ ನಳ ಸಂಪರ್ಕಗಳ ಸ್ಥಿತಿಯನ್ನು ಪರಿಶೀಲಿಸಿದ ಅವರು, ಮನೆಮಾಲಕಿಯರೊಂದಿಗೆ ಸಂವಾದ ನಡೆಸಿ ನೀರಿನ ಪೂರೈಕೆ ಸಮರ್ಪಕವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಕೆಲವೆಡೆ ಮಾತ್ರ ನೀರು ಸರಿಯಾಗಿ ಬರುತ್ತಿದ್ದು, ಅನೇಕ ಕಡೆಗಳಲ್ಲಿ ಪೂರೈಕೆ ಅಸಮರ್ಪಕವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶೀಲನೆ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಅಳಲುಗಳನ್ನು ಹಂಚಿಕೊಂಡು, ಗ್ರಾಮದಲ್ಲಿ ಒಂದೇ ಒಂದು ಕೊಳವೆಬಾವಿ ಇರುವುದರಿಂದ ಸಮರ್ಪಕ ನೀರಿನ ಮೂಲದ ಕೊರತೆ ಉಂಟಾಗಿದೆ. ಇದರಿಂದ ಎಲ್ಲಾ ಮನೆಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ನೀರು ಬಂದರೆ ಮಾತ್ರ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಕೆಲವು ವಾರ್ಡ್‌ಗಳಲ್ಲಿ ಜೆಜಿಎಂ ನಳಗಳ ಮೂಲಕ ನೀರು ಸರಿಯಾಗಿ ತಲುಪುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ದೂರಿದರು. ಕಾಮಗಾರಿಯ ಗುಣಮಟ್ಟ ಹಾಗೂ ನೀರಿನ ಹಂಚಿಕೆ ವ್ಯವಸ್ಥೆಯಲ್ಲಿನ ದೋಷಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಗ್ರಾಮಸ್ಥರ ದೂರನ್ನು ಆಲಿಸಿದ ಮೋಹನ್, ಕಾಮಗಾರಿಯ ಸಮಗ್ರ ಪರಿಶೀಲನೆ ನಡೆಸಿದ್ದು, ಸಂಬಂಧಿತ ಎಲ್ಲ ಅಂಶಗಳನ್ನು ಒಳಗೊಂಡ ವರದಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಎ.ಎಲ್. ರಾಠೋಡ್, ಅಡವಿ ಸೋಮನಾಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ಬಸನಗೌಡ ಬಿರಾದಾರ ಹಾಗೂ ಗ್ರಾಮಸ್ಥರಾದ ಅಂಬ್ರಯ್ಯ ಮಠ, ಬಸವರಾಜ ಕುಂಬಾರ, ಬಸಪ್ಪ ಬಿರಾದಾರ, ವಿರೇಶ ಚಲವಾದಿ, ಬೀರೆಪ್ಪ ಸೋಮನಾಳ, ಮೌನೇಶ ಬಿರಾದಾರ ಸೇರಿದಂತೆ ಗುತ್ತಿಗೆದಾರರು ಮತ್ತು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *