ಮುದ್ದೇಬಿಹಾಳ: ಮಾನವೀಯತೆಯ ಮೌಲ್ಯವನ್ನು ಸಾರುವ ಮನಮುಟ್ಟುವ ಘಟನೆ ವಿಜಯಪುರದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುದ್ದೇಬಿಹಾಳ ತಾಲ್ಲೂಕಿನ ಡವಳಗಿ ಗ್ರಾಮದ ಹತ್ತು ವರ್ಷದ ಬಾಲಕ ಆಕಾಶ ಹರಿಜನ ಸಾವಿನಲ್ಲೂ ಸಾರ್ಥಕತೆ ಸಾಧಿಸಿ, ಇಬ್ಬರು ಅಂಧರ ಬದುಕಿಗೆ ಬೆಳಕಾಗಿದ್ದಾನೆ.
ಮಲ್ಲಪ್ಪ ಹರಿಜನ ಹಾಗೂ ಸುಜಾತಾ ದಂಪತಿಯ ಏಕೈಕ ಪುತ್ರನಾದ ಆಕಾಶ (10) ಮಾರ್ಚ್ 22ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಆತನ ಮೆದುಳು ನಿಷ್ಕ್ರಿಯಗೊಂಡು (ಬ್ರೇನ್ ಡೆಡ್) ಮಾರ್ಚ್ 25ರಂದು ಮೃತಪಟ್ಟನು.
ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ಪೋಷಕರು ಮಾನವೀಯತೆಯನ್ನು ಮೆರೆದಿದ್ದಾರೆ. ಮೊದಲಿಗೆ ಅಂಗಾಂಗ ದಾನ ಮಾಡಲು ಮುಂದಾದರೂ, ಅಪಘಾತದ ಪರಿಣಾಮದಿಂದ ಇತರ ಅಂಗಾಂಗಗಳನ್ನು ದಾನ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ “ದೇಹವು ಸುಟ್ಟುಹೋಗುವ ಬದಲು ಇನ್ನೊಬ್ಬರ ಬದುಕಿಗೆ ಬೆಳಕಾಗಲಿ” ಎಂಬ ಉನ್ನತ ಚಿಂತನೆಯೊಂದಿಗೆ ನೇತ್ರದಾನ ಮಾಡಲು ನಿರ್ಧರಿಸಿದರು.
ಬಾಲಕನ ಮೃತದೇಹದಿಂದ ಎರಡು ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇದರಿಂದ ಇಬ್ಬರು ಅಂಧರ ಬದುಕಿಗೆ ಬೆಳಕು ದೊರೆತಿದೆ. ಏಕೈಕ ಪುತ್ರನನ್ನು ಕಳೆದುಕೊಂಡಿದ್ದರೂ ಸಮಾಜಕ್ಕೆ ಮಾದರಿಯಾದ ಈ ನಿರ್ಧಾರ ಎಲ್ಲರ ಮನಸ್ಸನ್ನು ಕಲುಕಿದೆ.
ಆಕಾಶ ತನ್ನ ತಂದೆ-ತಾಯಿಯ ಏಕೈಕ ಮಗನಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ. ಕುಟುಂಬದ ಈ ತ್ಯಾಗ ಮತ್ತು ಮಾನವೀಯತೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ, ವೈದ್ಯಕೀಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಕುಟುಂಬದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಕುಟುಂಬಕ್ಕೆ ಸಾಂತ್ವನ ಹೇಳಿ, ಬಾಲಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ಪ್ರೀತು ದಶವಂತ ಅವರು ಮೃತ ಬಾಲಕನ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು.
ಈ ಘಟನೆ ಸಾವಿನಲ್ಲೂ ಸಾರ್ಥಕತೆ ಸಾಧಿಸಬಹುದೆಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದು, ಡವಳಗಿ ಗ್ರಾಮದ ಈ ಬಾಲಕನ ಮಾನವೀಯ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ.

